2008ರ ಮಾಲೆಗಾಂವ್ ಸ್ಫೋಟ ಪ್ರಕರಣ : ಪ್ರಜ್ಞಾ ಸಿಂಗ್ ಸೇರಿದಂತೆ 7 ಆರೋಪಿಗಳಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಕೋರಿದ ಎನ್ಐಎ

ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ | PTI
ಮುಂಬೈ : 2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಏಳು ಆರೋಪಿಗಳಿಗೆ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ(ಯುಎಪಿಎ) ಸೆಕ್ಷನ್ 16ರ ಅಡಿಯಲ್ಲಿ ಸೂಕ್ತ ಶಿಕ್ಷೆ ವಿಧಿಸುವಂತೆ ಎನ್ಐಎ ಮುಂಬೈ ವಿಶೇಷ ನ್ಯಾಯಾಲಯವನ್ನು ಕೋರಿದೆ.
ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದ ಏಳು ಆರೋಪಿಗಳಲ್ಲಿ ಬಿಜೆಪಿ ನಾಯಕಿ ಹಾಗೂ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಸೇರಿದ್ದಾಳೆ.
ಸಾಧ್ವಿ ಪ್ರಜ್ಞಾ, ಕರ್ನಲ್ ಪ್ರಸಾದ್ ಪುರೋಹಿತ್, ಮೇಜರ್ ರಮೇಶ್ ಉಪಾಧ್ಯಾಯ, ಅಜಯ್ ರಹಿರ್ಕರ್, ಸಮೀರ್ ಕುಲಕರ್ಣಿ, ಸ್ವಾಮಿ ದಯಾನಂದ ಪಾಂಡೆ ಮತ್ತು ಸುಧಾಕರ್ ಚತುರ್ವೇದಿ ಮೇಲೆ ಹಿಂದುತ್ವ ಸಿದ್ಧಾಂತಕ್ಕೆ ಸಂಬಂಧಿಸಿದ ವ್ಯಾಪಕ ಪಿತೂರಿಯ ಭಾಗವಾಗಿ ಸ್ಫೋಟವನ್ನು ರೂಪಿಸಿ ಕಾರ್ಯಗತಗೊಳಿಸಿದ ಆರೋಪ ಹೊರಿಸಲಾಗಿದೆ.
ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ಸಾಧ್ವಿ ಪ್ರಜ್ಞಾಳನ್ನು ದೋಷಮುಕ್ತಗೊಳಿಸಲು ಈ ಹಿಂದೆ ಎನ್ಐಎ ಪ್ರಯತ್ನಿಸಿತ್ತು. ಆದರೆ ಎನ್ಐಎ ಈಗ ತನ್ನ ನಿಲುವನ್ನು ಬದಲಾಯಿಸಿದೆ. ಒತ್ತಡಕ್ಕೆ ಮಣಿದು 323 ಸಾಕ್ಷಿಗಳ ಪೈಕಿ 32 ಮಂದಿ ತಮ್ಮ ಹೇಳಿಕೆಗಳನ್ನು ಹಿಂತೆಗೆದುಕೊಂಡಿದ್ದರು, ಆದ್ದರಿಂದ ಅವರಿಗೆ ಯಾವುದೇ ವಿನಾಯಿತಿ ನೀಡಬಾರದು ಎಂದು ನ್ಯಾಯಾಲಯವನ್ನು ಒತ್ತಾಯಿಸಿದೆ.
ಯುಎಪಿಎಯ ಸೆಕ್ಷನ್ 16 ಅನ್ನು ಉಲ್ಲೇಖಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಎನ್ಐಎ ಮನವಿ ಮಾಡಿದೆ. ಯಾವುದೇ ಭಯೋತ್ಪಾದಕ ಚಟುವಟಿಕೆಯು ಸಾವಿಗೆ ಕಾರಣವಾದರೆ, ತಪ್ಪಿತಸ್ಥರಿಗೆ ಮರಣದಂಡನೆ ವಿಧಿಸಬಹುದು ಎಂದು ಮಹಾರಾಷ್ಟ್ರದ ಜಮಿಯತ್ ಉಲೇಮಾ ಪರ ವಕೀಲ ಶಾಹಿದ್ ನದೀಮ್ ಹೇಳಿದರು.
2008ರಲ್ಲಿ ನಡೆದ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ 6 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಸುದೀರ್ಘ 17 ವರ್ಷಗಳ ಬಳಿಕ NIAಯ 1,500ಕ್ಕೂ ಹೆಚ್ಚು ಪುಟಗಳ ಲಿಖಿತ ವಾದವನ್ನು ಸಲ್ಲಿಕೆ ಮಾಡಿದೆ. ಸಧ್ಯ ನ್ಯಾಯಾಲಯ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದು, ಮುಂಬೈ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎ.ಕೆ.ಲಹೋಟಿ ಮೇ 8ರಂದು ಈ ಕುರಿತು ತೀರ್ಪು ಪ್ರಕಟಿಸುವ ನಿರೀಕ್ಷೆಯಿದೆ.