ಮಳಿವಾಲ್ ಪ್ರಕರಣ | ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿಗೆ ಮಹಿಳಾ ಆಯೋಗ ಸಮನ್ಸ್

Update: 2024-05-16 21:34 IST
ಮಳಿವಾಲ್ ಪ್ರಕರಣ | ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿಗೆ ಮಹಿಳಾ ಆಯೋಗ ಸಮನ್ಸ್

ಸ್ವಾತಿ ಮಳಿವಾಲ್ , ಬಿಭವ್ ಕುಮಾರ್ |  PC : PTI 

  • whatsapp icon

ಹೊಸದಿಲ್ಲಿ : ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಳಿವಾಲ್ ಮೇಲೆ ಹಲ್ಲೆ ನಡೆಸಿರುವ ಆರೋಪವನ್ನು ಎದುರಿಸುತ್ತಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಗೆ ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗವು ಸಮನ್ಸ್ ನೀಡಿದ್ದು, ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ.

‘‘ಅರವಿಂದ್‌ ಕೇಜ್ರಿವಾಲ್ ರ ಆಪ್ತ ಕಾರ್ಯದರ್ಶಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಸಂಸದೆ ಸ್ವಾತಿ ಮಳಿವಾಲ್ ಆರೋಪಿಸಿದ್ದಾರೆ’’ ಎಂಬ ಮಾಧ್ಯಮ ವರದಿಯನ್ನು ತಾನು ಸ್ವಯಂಪ್ರೇರಿತವಾಗಿ ಗಣನೆಗೆ ತೆಗೆದುಕೊಂಡಿರುವುದಾಗಿ ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ. ದಿಲ್ಲಿ ಮುಖ್ಯಮಂತ್ರಿಯ ಆಪ್ತ ಕಾರ್ಯದರ್ಶಿಯು ಮುಖ್ಯಮಂತ್ರಿಯ ನಿವಾಸದಲ್ಲಿ ತನ್ನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ರಾಜ್ಯಸಭಾ ಸದಸ್ಯೆ ಹಾಗೂ ದಿಲ್ಲಿ ಮಹಿಳಾ ಆಯೋಗದ ಮಾಜಿ ಮುಖ್ಯಸ್ಥೆ ಸ್ವಾತಿ ಮಳಿವಾಲ್ ಆರೋಪಿಸಿದ್ದಾರೆ ಎಂಬುದಾಗಿ ಮಾಧ್ಯಮ ವರದಿ ತಿಳಿಸಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.

‘‘ಈ ಹಿನ್ನೆಲೆಯಲ್ಲಿ, ಈ ವಿಷಯದಲ್ಲಿ ಮೇ 17ರಂದು ಬೆಳಗ್ಗೆ 11 ಗಂಟೆಗೆ ಆಯೋಗವು ವಿಚಾರಣೆಯೊಂದನ್ನು ನಿಗದಿಪಡಿಸಿದೆ. ಎಲ್ಲಾ ಸಂಬಂಧಿತ ವ್ಯಕ್ತಿಗಳು ಆಯೋಗದ ಮುಂದೆ ಸ್ವತಃ ಹಾಜರಾಗಬೇಕು’’ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ.

ಕೇಜ್ರಿವಾಲ್ರ ನಿವಾಸದಲ್ಲಿ ತನ್ನ ಮೇಲೆ ಬಿಭವ್ ಕುಮಾರ್ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಮಳಿವಾಲ್ ಸೋಮವಾರ ಬೆಳಗ್ಗೆ ಪೊಲೀಸ್ ಕಂಟ್ರೋಲ್ ರೂಮ್ (ಪಿಸಿಆರ್)ಗೆ ಕರೆ ಮಾಡಿದ್ದರು ಎಂದು ಸೋಮವಾರ ಪೊಲೀಸರು ಹೇಳಿದ್ದರು. ಮಳಿವಾಲ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಗೆ ಹೋದರಾದರೂ, ಅವರು ಯಾವುದೇ ಅಧಿಕೃತ ದೂರು ದಾಖಲಿಸಿಲ್ಲ. ಮಳಿವಾಲ್ ಎರಡು ಬಾರಿ ಪಿಸಿಆರ್ ಕರೆ ಮಾಡಿರುವುದನ್ನು ಪೊಲೀಸ್ ದಾಖಲೆಗಳು ತೋರಿಸಿವೆ. ಕೇಜ್ರಿವಾಲ್ ಅವರ ಸೂಚನೆಗಳಂತೆ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದಾಗಿ ಆ ಕರೆಗಳಲ್ಲಿ ಮಳಿವಾಲ್ ಆರೋಪಿಸಿದ್ದಾರೆ ಎನ್ನಲಾಗಿದೆ.

ಮಳಿವಾಲ್ ಜೊತೆ ಕೆಟ್ಟದಾಗಿ ವರ್ತಿಸಿದ್ದು ಪೊಲೀಸರು : ಸಂಜಯ್ ಸಿಂಗ್

ಗುರುವಾರ ಬೆಳಗ್ಗೆ ಮಳಿವಾಲ್ ಘಟನೆ ಬಗ್ಗೆ ಪ್ರತಿಕ್ರಿಯಿಸಲು ಕೇಜ್ರಿವಾಲ್ ನಿರಾಕರಿಸಿದರು. ಆದರೆ, ಈ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಈ ಹಿಂದೆ ಸ್ವಾತಿ ಮಳಿವಾಲ್ರನ್ನು ದಿಲ್ಲಿ ಪೊಲೀಸರು ಹೇಗೆ ಎಳೆದುಕೊಂಡು ಹೋಗಿ ಅವರ ಜೊತೆ ಕೆಟ್ಟದಾಗಿ ವರ್ತಿಸಿದ್ದರು ಎನ್ನುವುದನ್ನು ಸ್ಮರಿಸಿದರು.

‘‘ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಶನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳಾ ಕುಸ್ತಿಪಟುಗಳು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದಾಗ, ಅವರಿಗೆ ಬೆಂಬಲವಾಗಿ ಸ್ವಾತಿ ಮಳಿವಾಲ್ ಕೂಡ ಧರಣಿಯಲ್ಲಿ ಪಾಲ್ಗೊಂಡಿದ್ದರು. ಆಗ ಪೊಲೀಸರು ಮಳಿವಾಲ್ರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ’’ ಎಂದು ಸಂಜಯ್ ಸಿಂಗ್ ಹೇಳಿದರು.

‘‘ಆಪ್ ನಮ್ಮ ಕುಟುಂಬ. ಪಕ್ಷವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಈ ವಿಷಯದಲ್ಲಿ ರಾಜಕೀಯ ಆಟಗಳನ್ನು ಆಡಬೇಡಿ’’ ಎಂದು ಸಿಂಗ್ ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News