ಉದ್ಧವ್ ಠಾಕ್ರೆ ಬಣದ ನಾಯಕನ ಹತ್ಯೆಗೈದ ಆರೋಪಿ ನಾಲ್ಕು ದಿನಗಳ ಹಿಂದೆ ಸಿಎಂ ಏಕನಾಥ್ ಶಿಂದೆಯನ್ನು ಭೇಟಿಯಾಗಿದ್ದ: ಸಂಜಯ್ ರಾವುತ್ ಆರೋಪ

Update: 2024-02-09 11:39 IST
ಉದ್ಧವ್ ಠಾಕ್ರೆ ಬಣದ ನಾಯಕನ ಹತ್ಯೆಗೈದ ಆರೋಪಿ ನಾಲ್ಕು ದಿನಗಳ ಹಿಂದೆ ಸಿಎಂ ಏಕನಾಥ್ ಶಿಂದೆಯನ್ನು ಭೇಟಿಯಾಗಿದ್ದ: ಸಂಜಯ್ ರಾವುತ್ ಆರೋಪ

Photo:X/@rautsanjay61

  • whatsapp icon

ಮುಂಬೈ: ತಮ್ಮ ಪಕ್ಷದ ನಾಯಕ ಅಭಿಷೇಕ್ ಘೋಸಾಲ್ಕರ್‌ಗೆ ಗುಂಡು ಹೊಡೆದ ಆರೋಪಿ ಮೌರಿಸ್ ನೊರೊನ್ಹಾ ಕೇವಲ ನಾಲ್ಕು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಏಕನಾಥ್ ಶಿಂದೆಯನ್ನು ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದ್ದ ಎಂದು ಶಿವಸೇನೆ (ಉದ್ಧವ್ ಠಾಕ್ರೆ) ಬಣದ ನಾಯಕ ಸಂಜಯ್ ರಾವುತ್ ಆರೋಪಿಸಿದ್ದಾರೆ.

ದಹಿಸಾರ್ ಉಪನಗರದಲ್ಲಿ ನಿನ್ನೆ ಸಂಜೆ ನಡೆದ ಈ ಆಘಾತಕಾರಿ ಘಟನೆಯ ನಂತರ ಆರೋಪಿ ನೊರೊನ್ಹಾ ತನಗೆ ತಾನೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆಯು ಫೇಸ್‌ಬುಕ್‌ ನೇರಪ್ರಸಾರದ ವಿಡಿಯೊದಲ್ಲಿ ಸೆರೆಯಾಗಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಸಂಜಯ್ ರಾವುತ್ ಫೋಟೋವೊಂದನ್ನು ಪೋಸ್ಟ್ ಮಾಡಿದ್ದು, ಆ ಚಿತ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂದೆಯೊಂದಿಗೆ ಆರೋಪಿ ನೊರೊನ್ಹಾ ಇರುವುದು ಕಂಡು ಬಂದಿದೆ.

ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ನೊರೊನ್ಹಾಗೆ ತಮ್ಮ ಪಕ್ಷ ಸೇರ್ಪಡೆಯಾಗುವಂತೆ ಆಹ್ವಾನವನ್ನೂ ನೀಡಿದ್ದರು ಎಂದು ಶಿವಸೇನೆಯ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

"ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾದ 'ವರ್ಷ' ಭೂಗತ ಪಾತಕಿಗಳ ಪಾಲಿಗೆ ಸ್ವರ್ಗವಾಗಿ ಬದಲಾಗಿದ್ದು, ಗೃಹ ಖಾತೆಯನ್ನೂ ಹೊಂದಿರುವ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ದಯನೀಯವಾಗಿ ವಿಫಲವಾಗಿರುವುದರಿಂದ, ಅವರು ಕೂಡಲೇ ರಾಜಿನಾಮೆ ನೀಡಬೇಕು" ಎಂದೂ ಸಂಜಯ್ ರಾವುತ್ ಆಗ್ರಹಿಸಿದ್ದಾರೆ.

ಸಾಮಾಜಿಕ ಕಾರ್ಯಕರ್ತ ಎಂದು ಹೇಳಲಾಗಿರುವ ನೊರೊನ್ಹಾರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಫೇಸ್‌ಬುಕ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಜಿ ಕಾರ್ಪೊರೇಟರ್ ಅಭಿಷೇಕ್ ಘೋಸಾಲ್ಕರ್ ಮೇಲೆ ಸ್ವತಃ ನೊರೊನ್ಹಾ ಗುಂಡಿನ ದಾಳಿ ನಡೆಸಿ, ಅವರನ್ನು ಹತ್ಯೆಗೈದಿದ್ದ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News