ಮಣಿಪುರ | ಮುಂದುವರಿದ ಉದ್ವಿಗ್ನತೆ ; ಹೆಚ್ಚುವರಿ ಭದ್ರತಾ ಪಡೆಗಳ ನಿಯೋಜನೆ
ಇಂಫಾಲ : ರಾಜಭವನಕ್ಕೆ ಮಂಗಳವಾರ ರ್ಯಾಲಿ ನಡೆಸಿದ ಸಂದರ್ಭ ವಿದ್ಯಾರ್ಥಿಗಳು ಹಾಗೂ ಭದ್ರತಾ ಪಡೆಗಳ ನಡುವೆ ಘರ್ಷಣೆ ಸಂಭವಿಸಿದ ಬಳಿಕ ಮಣಿಪುರದಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಆದರೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಂಫಾಲದಲ್ಲಿ ಮಂಗಳವಾರ ಅಪರಾಹ್ನ ಜಾರಿಗೊಳಿಸಲಾಗಿದ್ದ ಕರ್ಫ್ಯೂವನ್ನು ಇಂದು ಬೆಳಗ್ಗೆ ಕೂಡ ಮುಂದುವರಿಸಲಾಗಿದೆ. ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ನಗರದಲ್ಲಿ ಗಸ್ತು ನಡೆಸುತ್ತಿದ್ದಾರೆ. ಪರಿಸ್ಥಿತಿ ಉದ್ವಿಗ್ನವಾಗಿದೆ. ಆದರೆ, ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
ಇಲ್ಲಿನ ರಾಜಭವನಕ್ಕೆ ಮಂಗಳವಾರ ರ್ಯಾಲಿ ನಡೆಸಿದ ಸಂದರ್ಭ ವಿದ್ಯಾರ್ಥಿಗಳು ಹಾಗೂ ಭದ್ರತಾ ಪಡೆಗಳ ನಡುವೆ ಘರ್ಷಣೆ ಆರಂಭವಾಗಿತ್ತು.
► ಕಾಂಗ್ರೆಸ್ ಸಂಸದನಿಂದ ಅಮಿತ್ ಶಾ ಅವರಿಗೆ ಪತ್ರ
ಈ ನಡುವೆ ಇನ್ನರ್ ಮಣಿಪುರದ ಕಾಂಗ್ರೆಸ್ ಸಂಸದ ಬಿಮೋಲ್ ಅಕೋಯಿಜಾಮ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ಮಣಿಪುರದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಕುರಿತಂತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿಂಸಾಚಾರವನ್ನು ನಿಯಂತ್ರಿಸಲು ಭದ್ರತಾ ಪಡೆಗಳು ನಿರ್ಣಾಯಕವಾಗಿ ಕ್ರಮ ಕೈಗೊಳ್ಳುವ ಖಾತರಿ ನೀಡುವಂತೆ ಅವರು ಕರೆ ನೀಡಿದ್ದಾರೆ.
ಪ್ರಸಕ್ತ ಬಿಕ್ಕಟ್ಟಿನಲ್ಲಿ ಅಕ್ರಮ ವಲಸಿಗರು, ವಿದೇಶಿ ಶಕ್ತಿಗಳು, ಮಾದಕ ದ್ರವ್ಯ ಮಾಫಿಯಾ ಪಾಲ್ಗೊಂಡಿರುವ ಆರೋಪದ ಕುರಿತು ಕೂಲಂಕಷವಾಗಿ ತನಿಖೆ ನಡೆಸುವಂತೆ ಅಕೋಯಿಜಾಮ್ ಅವರು ಅಮಿತ್ ಶಾ ಅವರಿಗೆ ಮಂಗಳವಾರ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.