ಮಣಿಪುರ |ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ 33 ಜನರ ಬಂಧನ ; ಏಳು ಅಪ್ರಾಪ್ತ ವಯಸ್ಕರು ವಶಕ್ಕೆ
ಇಂಫಾಲ : ಕಳೆದ ಮೂರು ದಿನಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ ಆರೋಪದಲ್ಲಿ 33 ಜನರನ್ನು ಬಂಧಿಸಲಾಗಿದ್ದು, ಏಳು ಅಪ್ರಾಪ್ತ ವಯಸ್ಕರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮಣಿಪುರ ಪೋಲಿಸರು ಗುರುವಾರ ತಿಳಿಸಿದರು.
ರಾಜ್ಯದಲ್ಲಿ ಇತ್ತೀಚಿನ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಸೋಮವಾರದಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳಿಗಾಗಿ ಬಂಧನದಲ್ಲಿರುವವರ ವಿರುದ್ಧ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ ಪೋಲಿಸರು,ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗದಂತೆ ಮತ್ತು ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಲ್ಲಿ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಹಕರಿಸುವಂತೆ ಸಾರ್ವಜನಿಕರನ್ನು ವಿನಂತಿಸಿಕೊಂಡಿದ್ದಾರೆ.
ಮೇ 2023ರಿಂದ ಮೈತೈ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಸಂಘರ್ಷಗಳಿಂದ ತತ್ತರಿಸಿರುವ ಮಣಿಪುರದಲ್ಲಿ ಕನಿಷ್ಠ 237 ಜನರು ಮೃತಪಟ್ಟಿದ್ದಾರೆ ಮತ್ತು 59,000ಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದಾರೆ.
ಬಂಧಿತ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಸೋಮವಾರ ಪ್ರತಿಭಟನೆ ಸಂದರ್ಭ ರಾಜಭವನದ ಮೇಲೆ ಕಲ್ಲುತೂರಾಟ ನಡೆಸಿದ್ದ ಆರೋಪಿಗಳಾಗಿದ್ದಾರೆ ಎಂದು ಅಪರಿಚಿತ ಮೂಲಗಳು ತಿಳಿಸಿವೆ.
ಸೆ.6ರಂದು ಶಂಕಿತ ಕುಕಿ ಉಗ್ರರಿಂದ ಬಿಷ್ಣುಪುರ ಜಿಲ್ಲೆಯಲ್ಲಿ ರಾಕೆಟ್ ದಾಳಿಯಿಂದ ಓರ್ವ ವೃದ್ಧ ಮೃತಪಟ್ಟು 13ರ ಹರೆಯದ ಬಾಲಕಿ ಸೇರಿದಂತೆ ಆರು ಜನರು ಗಾಯಗೊಂಡ ಬಳಿಕ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಸೆ.7ರಂದು ಜಿರಿಬಾಮ್ ಜಿಲ್ಲೆಯಲ್ಲಿ ಮೈತೈ ಮತ್ತು ಕುಕಿ ಗುಂಪುಗಳ ನಡುವೆ ಗುಂಡಿನ ಕಾಳಗದಲ್ಲಿ ಕನಿಷ್ಠ ಏಳು ಜನರು ಕೊಲ್ಲಲ್ಪಟ್ಟಿದ್ದರು.
ಇದರ ನಂತರ ರಾಜ್ಯದಲ್ಲಿ ಸರಣಿ ಹಿಂಸಾಚಾರಗಳು ನಡೆದಿದ್ದು,ರಾಜ್ಯ ಸರಕಾರವು ಮೂರು ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ. ಐದು ಜಿಲ್ಲೆಗಳಲ್ಲಿ ಸೆ.15ರವರೆಗೆ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದೆ.
ಬುಧವಾರ ನಸುಕಿನಲ್ಲಿ ಅಪರಿಚಿತ ದುಷ್ಕರ್ಮಿಗಳು ದೀರ್ಘ ಕಾಲದಿಂದ ಮುಖ್ಯಮಂತ್ರಿ ಎನ್.ಬೀರೇನ್ ಸಿಂಗ್ ಅವರ ಟೀಕಾಕಾರರಾಗಿರುವ ಇಂಫಾಲ ಪಶ್ಚಿಮ ಜಿಲ್ಲೆಯ ಪತ್ರಕರ್ತ ಯಾಂಬೆಮ್ ಲಾಬಾರ ನಿವಾಸದ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದರು.