ಮಣಿಪುರ: ಚುರಾಚಂದ್ರಪುರದಲ್ಲಿ ಮತ್ತೆ ಭುಗಿಲೆದ್ದ ಘರ್ಷಣೆ ; ಓರ್ವನ ಸಾವು, ಹಲವರಿಗೆ ಗಾಯ

Photo Credit | NDTV
ಗುವಾಹಟಿ: ಮಣಿಪುರದ ಚುರಾಚಂದ್ರಪುರದ ಹೊರವಲಯದಲ್ಲಿ ಮಂಗಳವಾರ ಹಮಾರ್ ಮತ್ತು ಜೋಮಿ ಬುಡಕಟ್ಟುಗಳ ನಡುವೆ ಹೊಸದಾಗಿ ಭುಗಿಲೆದ್ದ ಘರ್ಷಣೆಗಳಲ್ಲಿ ಓರ್ವ ವ್ಯಕ್ತಿಯು ಕೊಲ್ಲಲ್ಪಟ್ಟಿದ್ದು, ಇತರ ಹಲವಾರು ಜನರು ಗಾಯಗೊಂಡಿದ್ದಾರೆ.
ಮೃತ ವ್ಯಕ್ತಿಯನ್ನು ಲಾಲ್ರೋಪುಯಿ ಪಖುಮೇಟ್(53) ಎಂದು ಗುರುತಿಸಲಾಗಿದೆ.
ಜೋಮಿ ಬಣವು ತಮ್ಮ ಸಮುದಾಯದ ಧ್ವಜವನ್ನು ಹಾರಿಸುವುದನ್ನು ಹಮಾರ್ ಗುಂಪುಗಳು ವಿರೋಧಿಸಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿತ್ತು.
ದೊಣ್ಣೆಗಳನ್ನು ಹಿಡಿದುಕೊಂಡಿದ್ದ ಗುಂಪುಗಳು ಕಲ್ಲುತೂರಾಟದಲ್ಲಿ ತೊಡಗಿದ್ದು, ಉದ್ರಿಕ್ತ ಗುಂಪುಗಳನ್ನು ಚದುರಿಸಲು ಪೋಲಿಸರು ಅಶ್ರುವಾಯು ಪ್ರಯೋಗದ ಜೊತೆಗೆ ಗಾಳಿಯಲ್ಲಿ ಹಲವಾರು ಸುತ್ತು ಗುಂಡುಗಳನ್ನು ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದರು.
ಹಲವಾರು ಆಸ್ತಿಗಳನ್ನು ಧ್ವಂಸ ಮಾಡಿದ ಗುಂಪುಗಳನ್ನು ನಿಯಂತ್ರಿಸಲು ಪೋಲಿಸರು ಹರಸಾಹಸ ಪಡುವಂತಾಗಿತ್ತು. ಈ ನಡುವೆ ಗುಂಪುಗಳಲ್ಲಿದ್ದ ಕೆಲವರು ತಮ್ಮ ಎದುರಾಳಿಗಳ ಮೇಲೆ ಗುಂಡುಗಳನ್ನು ಹಾರಿಸಿದ್ದರು ಎಂದರು.
ರವಿವಾರ ಝೆನ್‌ಹಾಂಗ್‌ನಲ್ಲಿ ಹಮಾರ್ ಇನ್ಪುಯಿ ಪ್ರಧಾನ ಕಾರ್ಯದರ್ಶಿ ರಿಚರ್ಡ್ ಹಮಾರ್ ಮೇಲೆ ನಡೆದ ದಾಳಿಯು ಉಭಯ ಸಮುದಾಯಗಳ ನಡುವೆ ಉದ್ವಿಗ್ನತೆಗೆ ಕಾರಣವಾದ ಬಳಿಕ ಚುರಾಚಂದ್ರಪುರದಲ್ಲಿ ಕರ್ಫ್ಯೂ ಹೇರಲಾಗಿತ್ತು.
ಹಮಾರ್ ಇನ್ಪುಯಿ ಮತ್ತು ಜೋಮಿ ಮಂಡಳಿ ಶಾಂತಿ ಒಪ್ಪಂದ ಮಾಡಿಕೊಂಡ ಕೆಲವೇ ಗಂಟೆಗಳ ಬಳಿಕ ಮಂಗಳವಾರ ಪರಿಸ್ಥಿತಿ ಉಲ್ಬಣಗೊಂಡಿತ್ತು.
ಘರ್ಷಣೆಗಳು ಮತ್ತೆ ಭುಗಿಲೆದ್ದ ಹಿನ್ನೆಲೆಯಲ್ಲಿ ಜೋಮಿ ವಿದ್ಯಾರ್ಥಿಗಳ ಒಕ್ಕೂಟವು ಪ್ರದೇಶದಲ್ಲಿಯ ಪ್ರಕ್ಷುಬ್ಧ ಸ್ಥಿತಿಯನ್ನು ಉಲ್ಲೇಖಿಸಿ ಬುಧವಾರದಿಂದ ‘ಅನಿರ್ದಿಷ್ಟಾವಧಿ ತುರ್ತು ಬಂದ್’ಗೆ ಕರೆ ನೀಡಿದೆ. ಜನರಿಗೆ ತಮ್ಮ ಮನೆಗಳಲ್ಲಿಯೇ ಇರುವಂತೆ ಸಲಹೆ ನೀಡಿರುವ ಅದು, ಪರಿಸ್ಥಿತಿಯಲ್ಲಿ ಸುಧಾರಣೆಯಾಗುವವರೆಗೂ ಬಂದ್ ಜಾರಿಯಲ್ಲಿರುತ್ತದೆ ಎಂದು ತಿಳಿಸಿದೆ.
ಈ ನಡುವೆ ಶಾಂತಿಯನ್ನು ಕಾಯ್ದುಕೊಳ್ಳುವಂತೆ ಜನರನ್ನು ಆಗ್ರಹಿಸಿರುವ ಜಿಲ್ಲಾಧಿಕಾರಿ ಧರುಣ ಕುಮಾರ ಎಸ್ ಅವರು, ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.