ಮಣಿಪುರ: ಸಹೋದ್ಯೋಗಿಗಳಿಗೆ ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡ ಯೋಧ
ಇಂಫಾಲ: ಅಸ್ಸಾಂ ರೈಫಲ್ಸ್ ನ ಯೋಧನೋರ್ವ ತನ್ನ ಆರು ಮಂದಿ ಸಹೋದ್ಯೋಗಿಗಳಿಗೆ ಗುಂಡು ಹಾರಿಸಿ, ಬಳಿಕ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಂದೇಲ್ ಜಿಲ್ಲೆಯ ಸಾಜಿಕ್ ಟೆಂಪಕ್ ಪ್ರದೇಶದಲ್ಲಿ ಮಂಗಳವಾರ ತಡ ರಾತ್ರಿ ಅಸ್ಸಾಂ ರೈಫಲ್ಸ್ ನ ಯೋಧ ತನ್ನ ಸಹೋದ್ಯೋಗಿಗಳಿಗೆ ಗುಂಡು ಹಾರಿಸಿದ್ದಾನೆ. ಅನಂತರ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಯೋಧ ತನ್ನ ಸಹೋದ್ಯೋಗಿಗಳಿಗೆ ಗುಂಡು ಹಾರಿಸಲು ಕಾರಣ ಏನು ಎಂಬುದು ಇದುವರೆಗೆ ತಿಳಿದು ಬಂದಿಲ್ಲ. ಆದರೆ, ಈ ಘಟನೆಗೂ ಮಣಿಪುರದ ಜನಾಂಗೀಯ ಹಿಂಸಾಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಹೇಳಿದ್ದಾರೆ.
‘‘ಗಾಯಗೊಂಡವರು ಯಾರೂ ಮಣಿಪುರದವರು ಅಲ್ಲ ಎಂಬ ಕಾರಣಕ್ಕೆ ಈ ದುರಾದೃಷ್ಟಕರ ಘಟನೆಯನ್ನು ಮಣಿಪುರದ ಜನಾಂಗೀಯ ಹಿಂಸಾಚಾರದೊಂದಿಗೆ ನಂಟು ಕಲ್ಪಿಸಲು ಸಾಧ್ಯವಿಲ್ಲ. ಘಟನೆಯ ಹಿಂದಿನ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ’’ ಎಂದು ಐಜಿಎಆರ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಗಾಯಗೊಂಡ ಯೋಧರನ್ನು ಚಿಕಿತ್ಸೆಗಾಗಿ ಚುರಾಚಂದಪುರದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅದು ಹೇಳಿದೆ.
ಎಲ್ಲಾ ಅಸ್ಸಾಂ ರೈಫಲ್ಸ್ ಬೆಟಾಲಿಯನ್ ಗಳು ಮಣಿಪುರದ ವಿವಿಧ ಸಮುದಾಯಗಳು ಸೇರಿದಂತೆ ಹಲವು ಸಮುದಾಯದ ಸಂಯೋಜನೆಯನ್ನು ಹೊಂದಿವೆ ಎಂದು ಐಜಿಎಆರ್ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಸಮಾಜದ ಧ್ರುವೀಕರಣದ ಹೊರತಾಗಿಯ ಮಣಿಪುರದಲ್ಲಿ ಶಾಂತಿ ಹಾಗೂ ಸ್ಥಿರತೆ ಕಾಪಾಡಲು ಎಲ್ಲಾ ಸಿಬ್ಬಂದಿ ಒಟ್ಟಾಗಿ ವಾಸಿಸುತ್ತಿದ್ದಾರೆ ಹಾಗೂ ಕಾರ್ಯಾಚರಿಸುತ್ತಿದ್ದಾರೆ ಎಂದು ಹೇಳಿಕೆ ತಿಳಿಸಿದೆ.