ಮಣಿಪುರ: ಸೇನಾಧಿಕಾರಿಯ ಅಪಹರಣ

Update: 2024-03-08 16:25 GMT

ಇಂಫಾಲ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಗಳ ನಡುವೆಯೇ ಭಾರತೀಯ ಸೇನೆಯ ಜ್ಯೂನಿಯರ್ ಕಮಿಷನ್ಡ್ ಅಧಿಕಾರಿ (ಜೆಸಿಒ) ಕೊನ್ಸಾಮ್ ಖೇಡಾ ಸಿಂಗ್ ಅವರನ್ನು ಅಪಹರಿಸಲಾಗಿದೆ. ಅಧಿಕಾರಿಯ ರಕ್ಷಣೆಗಾಗಿ ಸಂಘಟಿತ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಸಿಂಗ್ ಅವರನ್ನು ಶುಕ್ರವಾರ ಬೆಳಗ್ಗೆ ಒಂಭತ್ತು ಗಂಟೆಯ ಸುಮಾರಿಗೆ ಥೌಬಾಲ್ ಜಿಲ್ಲೆಯಲ್ಲಿನ ಅವರ ನಿವಾಸದಿಂದ ವಾಹನವೊಂದರಲ್ಲಿ ಅಪಹರಿಸಲಾಗಿದೆ. ಅಪಹರಣಕ್ಕೆ ಕಾರಣವಿನ್ನೂ ತಿಳಿದುಬಂದಿಲ್ಲ. ಸಂಘಟಿತ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದ್ದು,ರಾಷ್ಟ್ರೀಯ ಹೆದ್ದಾರಿ 102ರಲ್ಲಿ ಎಲ್ಲ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯು ತಿಳಿಸಿದೆ.

2023, ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಾಗಿನಿಂದ ಕನಿಷ್ಠ 219 ಜನರು ಕೊಲ್ಲಲ್ಪಟ್ಟಿದ್ದು,ಹತ್ತಾರು ಸಾವಿರ ಜನರು ಸ್ಥಳಾಂತರಗೊಂಡಿದ್ದಾರೆ.

ಸಿಂಗ್ ಅಪಹರಣವು ಸಂಘರ್ಷ ಆರಂಭಗೊಂಡಾಗಿನಿಂದ ರಜೆಯಲ್ಲಿ ಅಥವಾ ಕರ್ತವ್ಯದಲ್ಲಿದ್ದ ಯೋಧರನ್ನು ಅಥವಾ ಅವರ ಬಂಧುಗಳನ್ನು ಗುರಿಯಾಗಿಸಿಕೊಂಡ ನಾಲ್ಕನೇ ಘಟನೆಯಾಗಿದೆ. ಶಾಂತಿ ಮತ್ತು ಸಹಜತೆಯನ್ನು ಮರಳಿಸಲು ಶ್ರಮಿಸುತ್ತಿರುವ ಭದ್ರತಾ ಪಡೆಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿರುವುದಕ್ಕಾಗಿ ದುಷ್ಕರ್ಮಿಗಳ ಗುರಿಯಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫೆ.27ರಂದು ಉಗ್ರವಾದಿ ಮೈತೈ ಸಶಸ್ತ್ರ ಗುಂಪು ಅರಂಬಾಯಿ ತೆಂಗೋಲ್ನ ಸದಸ್ಯರು ಹೆಚ್ಚುವರಿ ಎಸ್ಪಿಯೋರ್ವರ ಮೇಲೆ ಅವರ ಇಂಫಾಲ ನಿವಾಸದಲ್ಲಿಯೇ ದಾಳಿ ನಡೆದ್ದರು. ಈ ಘಟನೆಯು ಇಂತಹ ಗುಂಪುಗಳನ್ನು ಮಟ್ಟ ಹಾಕಲು ತಮಗೆ ಮುಕ್ತ ಸ್ವಾತಂತ್ರ್ಯಕ್ಕಾಗಿ ಆಗ್ರಹಿಸಿ ಮಣಿಪುರ ಪೋಲಿಸರು ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿರಿಸಿ ಪ್ರತಿಭಟನೆ ನಡೆಸಲು ಕಾರಣವಾಗಿತ್ತು.

ಕಳೆದ ವರ್ಷದ ನವಂಬರ್ ನಲ್ಲಿ ಭಾರತೀಯ ಸೇನೆಯ ಯೋಧರೋರ್ವರ ಕುಟುಂಬದ ಐವರು ಸದಸ್ಯರು ಚುರಾಚಂದ್ರಪುರದಿಂದ ಲೀಮಾಖೊಂಗ್ಗೆ ಪ್ರಯಾಣಿಸುತ್ತಿದ್ದಾಗ ಅಪರಿಚಿತ ಸಶಸ್ತ್ರ ಗುಂಪೊಂದು ಅವರನ್ನು ಅಪಹರಿಸಿತ್ತು ಮತ್ತು ಅವರ ಪೈಕಿ ನಾಲ್ವರನ್ನು ಕೊಂದಿತ್ತು.

2023,ಸೆಪ್ಟಂಬರ್ ನಲ್ಲಿ ಲೀಮಾಖೊಂಗ್ ನಲ್ಲಿ ಡಿಫೆನ್ಸ್ ಸರ್ವಿಸ್ ಕಾರ್ಪ್ಸ್ ನೊಂದಿಗೆ ನಿಯೋಜಿಸಲ್ಪಟ್ಟಿದ್ದ ಮಾಜಿ ಅಸ್ಸಾಂ ರೆಜಿಮೆಂಟ್ ಯೋಧ ಸೆರ್ಟೊ ಥಂಗ್ಥಾಂಗ್ ಕೋಮ್ ಅವರನ್ನು ಅಪರಿಚಿತ ಸಶಸ್ತ್ರ ಗುಂಪೊಂದು ಅಪಹರಿಸಿ ಹತ್ಯೆಗೈಯ್ದಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News