ಮಣಿಪುರ: ಸ್ಥಳಗಳ ಅಧಿಕೃತ ಹೆಸರುಗಳ ದುರುಪಯೋಗ ತಡೆಯಲು ಮಸೂದೆ

Update: 2024-02-11 16:44 GMT

Photo: bnnbreaking.com

ಇಂಫಾಲ : ರಾಜ್ಯದಲ್ಲಿಯ ಸ್ಥಳಗಳ ಅಧಿಕೃತ ಹೆಸರುಗಳ ದುರುಪಯೋಗವನ್ನು ತಡೆಯುವ ಉದ್ದೇಶವನ್ನು ಹೊಂದಿರುವ ಮಣಿಪುರ ಸ್ಥಳನಾಮಗಳ ಮಸೂದೆ, 2024ರ ಕರಡನ್ನು ರಾಜ್ಯ ಸಚಿವ ಸಂಪುಟವು ಅನುಮೋದಿಸಿದೆ. ಫೆ.28ರಿಂದ ಆರಂಭವಾಗಲಿರುವ 12ನೇ ಮಣಿಪುರ ವಿಧಾನಸಭೆಯ ಐದನೇ ಅಧಿವೇಶನದಲ್ಲಿ ಮಸೂದೆಯನ್ನು ಪರಿಗಣಿಸಲಾಗುವುದು ಎಂದು ವರದಿಗಳು ತಿಳಿಸಿವೆ. ಅಧಿಕೃತ ಸ್ಥಳನಾಮಗಳ ದುರುಪಯೋಗಕ್ಕಾಗಿ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಮಸೂದೆಯಲ್ಲಿ ಪ್ರಸ್ತಾವಿಸಲಾಗಿದೆ.

ಭೂ ಸಂಪನ್ಮೂಲ ಇಲಾಖೆಯ ಮಸೂದೆಯ ಪ್ರಸ್ತಾವವು ಸ್ಥಳಗಳ ಹೆಸರುಗಳ ಸರಿಯಾದ ಬಳಕೆಯನ್ನು ಜಾರಿಗೊಳಿಸಲು ಸಾಂಸ್ಥಿಕ ಕಾರ್ಯವಿಧಾನವನ್ನು ಸ್ಥಾಪಿಸುವ ಹಾಗೂ ಸ್ಥಳಗಳಿಗೆ ಹೆಸರುಗಳನ್ನು ನೀಡಲು ಮತ್ತು ಸ್ಥಳಗಳ ಹೆಸರುಗಳನ್ನು ಬದಲಿಸಲು ವಿಧಿವಿಧಾನಗಳನ್ನು ರೂಪಿಸುವ ಅಗತ್ಯಕ್ಕೆ ಒತ್ತು ನೀಡಿದೆ.

ಕರಡು ಮಸೂದೆಯು ಸರಕಾರದ ಅನುಮೋದನೆಗೊಳಪಟ್ಟು ಸ್ಥಳಗಳ ಹೆಸರುಗಳ ಕುರಿತು ಶಿಫಾರಸುಗಳನ್ನು ಮಾಡಲು ‘ಸ್ಥಳ ನಾಮಗಳ ಸಮಿತಿ ’ಯ ರಚನೆಯನ್ನು ಪ್ರಸ್ತಾವಿಸಿದೆ ಎಂದು ಮಣಿಪುರ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಎಸ್.ರಂಜನ ಸಿಂಗ್ ತಿಳಿಸಿದರು.

ಕಳೆದ ಮೇ 3ರಿಂದ ಮೈತೈ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗಳಿಂದಾಗಿ ಮಣಿಪುರವು ತತ್ತರಿಸಿದೆ. 200ಕ್ಕೂ ಅಧಿಕ ಜನರು ಮೃತಪಟ್ಟಿದ್ದು,ಸುಮಾರು 67,000 ಜನರು ಮನೆಗಳನ್ನು ತೊರೆದಿದ್ದಾರೆ.

ಸಂಘರ್ಷವು ರಾಜ್ಯದಲ್ಲಿಯ ಸ್ಥಳಗಳ ಅಧಿಕೃತ ಹೆಸರುಗಳಿಗೂ ಹರಡಿಕೊಂಡಿದೆ. ಉದಾಹರಣೆಗೆ ಕುಕಿ-ರೆಮಿ ಪ್ರಾಬಲ್ಯದ ಚುರಾಚಂದಪುರ ಜಿಲ್ಲೆಯಲ್ಲಿ ಜನರು ಪ್ರದೇಶವನ್ನು ಅದರ ಆಡುಮಾತಿನ ಲಮ್ಕಾ ಹೆಸರಿನಿಂದ ಕರೆಯಲು ಆರಂಭಿಸಿದ್ದಾರೆ. ಜಿಲ್ಲೆಯ ಅಧಿಕೃತ ಹೆಸರು 1891ರಿಂದ 1941ರವರೆಗೆ ಮಣಿಪುರ ರಾಜ್ಯವನ್ನು ಆಳಿದ್ದ ಮೈತೈ ದೊರೆ ಚುರಾಚಂದ ಸಿಂಗ್ನಿಂದ ಬಂದಿರುವುದು ಇದಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಮನೆಗಳು,ಅಂಗಡಿಗಳು ಮತ್ತು ಸರಕಾರಿ ಕಚೇರಿಗಳ ಮೇಲೂ ಲಮ್ಕಾ ಹೆಸರು ಪ್ರಮುಖವಾಗಿ ಕಾಣಿಸಿಕೊಳ್ಳತೊಡಗಿದೆ.

ರಾಜ್ಯದ ಆಡಳಿತದಲ್ಲಿ ಗೊಂದಲವನ್ನುಂಟು ಮಾಡುವ ಸಂಭಾವ್ಯ ದುರುದ್ದೇಶದೊಂದಿಗೆ ಕೆಲವು ವ್ಯಕ್ತಿಗಲಿ ಅಥವಾ ಜನರ ಗುಂಪುಗಳು ಅಥವಾ ಸಂಘಟನೆಗಳಿಂದ ಸ್ಥಳಗಳ ಅನಧಿಕೃತ ಹೆಸರುಗಳ ಬಳಕೆಯ ಹಲವಾರು ನಿದರ್ಶನಗಳಿವೆ. ಸ್ಥಳಗಳ ಹೆಸರುಗಳ ಅನಧಿಕೃತ ಬಳಕೆಯಿಂದಾಗಿ ಸರಕಾರಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸುವಾಗ ಕೆಲವು ಆಡಳಿತಾತ್ಮಕ ಸವಾಲುಗಳನ್ನು ಎದುರಿಸುವಂತಾಗಿದೆ ಎಂದು ಮಸೂದೆಯ ಪ್ರಸ್ತಾವದಲ್ಲಿ ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News