ಮಣಿಪುರ: ಹಲವು ಕುಕಿ ಸಂಘಟನೆಗಳಿಂದ ಚುನಾವಣೆ ಬಹಿಷ್ಕಾರ
ಚುರಾಚಂದ್ಪುರ : ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಹಲವು ನಾಗರಿಕ ಸಮಾಜ ಸಂಘಟನೆಗಳು ಹಾಗೂ ಕುಕಿ-ರೊ ಸಮುದಾಯದ ಸಂಘಟನೆಗಳು ಘೋಷಿಸಿವೆ.
ಮಣಿಪುರದಲ್ಲಿ ಹೊಸ ಹಿಂಸಾಚಾರದ ಘಟನೆಗಳ ಹಿನ್ನೆಲೆಯಲ್ಲಿ ಈ ಸಂಘಟನೆಗಳು ಲೋಕಸಭೆ ಚುನಾವಣೆ ಬಹಿಷ್ಕರಿಸಿವೆ. ಇಂಫಾಲ ಪೂರ್ವ ಜಿಲ್ಲೆಯಲ್ಲಿ ಶನಿವಾರ ಎರಡು ಶಸಸ್ತ್ರ ಗುಂಪುಗಳ ನಡುವೆ ಶನಿವಾರ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಯುವಕರು ಮೃತಪಟ್ಟಿದ್ದರು. ತೆಂಗ್ನೌಪಾಲ್ ಜಿಲ್ಲೆಯಲ್ಲಿ ಶುಕ್ರವಾರ ಗ್ರಾಮ ಸ್ವಯಂ ಸೇವಕರು ಹಾಗೂ ಅಪರಿಚಿತ ದುಷ್ಕರ್ಮಿಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಗಾಯಗೊಂಡಿದ್ದರು.
ಚುನಾವಣಾ ಬಹಿಷ್ಕಾರದ ಕ್ರಮವಾಗಿ ನಾವು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾವ ಅಭ್ಯರ್ಥಿಯನ್ನು ಕೂಡ ಕಣಕ್ಕಿಳಿಸುವುದಿಲ್ಲ ಎಂದು ಕುಕಿ ಸಮುದಾಯ ಈಗಾಗಲೇ ಘೋಷಿಸಿದೆ.
ಚುನಾವಣೆ ಬಹಿಷ್ಕರಿಸುವ ತಮ್ಮ ನಿರ್ಧಾರದ ಕುರಿತು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು, ಔಟರ್ ಮಣಿಪುರದ ಮಾಜಿ ಸಂಸದೆ ಕಿಮ್ ಗಂಗ್ಟೆ ಒಳಗೊಂಡ ಕುಕಿ-ರೊ ಮಹಿಳೆಯರ ಸಂಘಟನೆ ದಿ ಗ್ಲೋಬಲ್ ಕುಕಿ-ರೆಮಿ-ಹಮರ್ ವುಮನ್ ಕಮ್ಯುನಿಟಿ, ಹಾಗೂ ದಿಲ್ಲಿಯ ಕುಕಿ-ರೊಮಿ-ಹಮರ್ ವುಮನ್ಸ್ ಫಾರಂನ ನಾಯಕರು ಈ ಹಿಂದೆ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಪತ್ರ ಬರೆದಿತ್ತು. ಅನಂತರ ಕುಕಿ ನೇಷನಲ್ ಎಸೆಂಬ್ಲಿ ಹಾಗೂ ಕುಕಿ ಇನ್ಪಿ ಕೂಡ ಈ ಗುಂಪಿಗೆ ಸೇರಿದೆ.