ಮಣಿಪುರ | ಸರಕಾರಿ ಅಧಿಕಾರಿಯ ನಿವಾಸದ ಮೇಲೆ ಗುಂಡಿನ ದಾಳಿ

Update: 2024-07-25 16:23 GMT

ಸಾಂದರ್ಭಿಕ ಚಿತ್ರ

ಇಂಫಾಲ : ಅಜ್ಞಾತ ಬಂದೂಕುಧಾರಿಗಳು ಬುಧವಾರ ರಾತ್ರಿ ಇಂಫಾಲದಲ್ಲಿರುವ ಮಣಿಪುರ ಗ್ರಾಹಕ ವ್ಯವಹಾರಗಳ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ನಿರ್ದೇಶಕರ ನಿವಾಸದ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ದಾಳಿಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಅವರು ಹೇಳಿದರು.

ದಾಳಿಯು ಪಶ್ಚಿಮ ಇಂಫಾಲದಲ್ಲಿರುವ ಸಿಂಗ್‌ಜಾಮೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ 10:30ರ ಸುಮಾರಿಗೆ ಸಂಭವಿಸಿದೆ.

ನಮಗೆ ಯಾವುದೇ ವ್ಯಕ್ತಿ ಅಥವಾ ಸಂಘಟನೆಯೊಂದಿಗೆ ಶತ್ರುತ್ವವಿಲ್ಲ ಅಥವಾ ಯಾರಿಂದಲೂ ಯಾವುದೇ ಎಚ್ಚರಿಕೆ ಇರಲಿಲ್ಲ ಎಂದು ಇಲಾಖೆಯ ನಿರ್ದೇಶಕ ರಾಬರ್ಟ್ಸನ್ ಅಸೀಮ್ ಗುರುವಾರ ‘ಹಿಂದೂಸ್ತಾನ್ ಟೈಮ್ಸ್’ಗೆ ಹೇಳಿದ್ದಾರೆ. ‘‘ದಾಳಿಯನ್ನು ಯಾಕೆ ನಡೆಸಲಾಗಿದೆ ಮತ್ತು ದಾಳಿಯನ್ನು ಯಾರು ನಡೆಸುತ್ತಿದ್ದಾರೆ ಎನ್ನುವ ಬಗ್ಗೆ ನಾನು ಈಗಲೂ ಗೊಂದಲದಲ್ಲಿದ್ದೇನೆ’’ ಎಂದು ಅವರು ಹೇಳಿದರು.

ಪಿಶುಮ್ ನಿಂಗೊಮ್ ಲೈರಕ್‌ನ ಪೂರ್ವದ ಬದಿಯಿಂದ ಇಬ್ಬರು ಬಂದು ನಿರ್ದೇಶಕರ ನಿವಾಸದತ್ತ 4-5 ಸುತ್ತು ಗುಂಡು ಹಾರಿಸುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದರು. ದಾಳಿ ನಡೆಸಿದ ಬಳಿಕ ದಾಳಿಕೋರರು ಪರಾರಿಯಾಗಿದ್ದಾರೆ.

► ವಿಧಾನಸಭೆ ಅಧಿವೇಶನಕ್ಕೆ ಹಾಜರಾಗುವಂತೆ ಬುಡಕಟ್ಟು ಶಾಸಕರಿಗೆ ಮುಖ್ಯಮಂತ್ರಿ ಆಹ್ವಾನ

ಮುಂಬರುವ ಮಣಿಪುರ ವಿಧಾನಸಭೆಯ 12ನೇ ಅಧಿವೇಶನಕ್ಕೆ ಹಾಜರಾಗುವಂತೆ 10 ಕುಕಿ-ರೊ ಶಾಸಕರಿಗೆ ಮಣಿಪುರ ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್ ಗುರುವಾರ ಮನವಿ ಮಾಡಿದ್ದಾರೆ.

‘‘ಅಧಿವೇಶನದಲ್ಲಿ ಭಾಗವಹಿಸುವಂತೆ ನಾನು ಅವರನ್ನು ವೈಯಕ್ತಿಕವಾಗಿ ಆಮಂತ್ರಿಸುತ್ತಿದ್ದೇನೆ. ನಾವು ಸಹಕಾರ ನೀಡುತ್ತೇವೆ’’ ಎಂದು ಮುಖ್ಯಮಂತ್ರಿ ಹೇಳಿದರು. ವಿಧಾನಸಭೆ ಅಧಿವೇಶನವು ಜುಲೈ 31ರಿಂದ ಆಗಸ್ಟ್ 12ರವರೆಗೆ ನಡೆಯಲಿದೆ.

ಈ 10 ಬುಡಕಟ್ಟು ಶಾಸಕರ ಪೈಕಿ ಏಳು ಮಂದಿ ಆಡಳಿತಾರೂಢ ಬಿಜೆಪಿಗೆ ಮತ್ತು ಇಬ್ಬರು ಕುಕಿ ಪೀಪಲ್ಸ್ ಅಲಯನ್ಸ್ಗೆ ಸೇರಿದ್ದಾರೆ. ಒಬ್ಬರು ಪಕ್ಷೇತರರಾಗಿದ್ದಾರೆ.

ಮಣಿಪುರದಲ್ಲಿ ಕಳೆದ ವರ್ಷದ ಮೇ 3ರಂದು ಸ್ಫೋಟಗೊಂಡಿರುವ ಹಿಂಸೆ ಇನ್ನೂ ಮುಂದುವರಿಯುತ್ತಿದೆ. ಈ ಹಿನ್ನೆಲೆಯಲ್ಲಿ, ಬುಡಕಟ್ಟು ಜನರಿಗೆ ಪ್ರತ್ಯೇಕ ಆಡಳಿತ ವ್ಯವಸ್ಥೆ ಬೇಕೆಂದುದ ಆಗ್ರಹಿಸಿ ಅವರು ಹಿಂದಿನ ಎರಡು ವಿಧಾನಸಭೆ ಅಧಿವೇಶನಗಳನ್ನು ಬಹಿಷ್ಕರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News