ಬಂಡುಕೋರ ಗುಂಪುಗಳಿಗೆ ಸಹಕರಿಸುತ್ತಿರುವ ಭದ್ರತಾ ಪಡೆ: ಕುಕಿಗಳ ಆರೋಪ ತಿರಸ್ಕರಿಸಿದ ಮಣಿಪುರ ಪೊಲೀಸರು
ಇಂಫಾಲ: ಇತ್ತೀಚೆಗೆ ಹಿಂಸಾಚಾರದ ಘಟನೆಗಳು ವರದಿಯಾದ ಮೊರೆಹ್ ಪಟ್ಟಣದಲ್ಲಿ ಭದ್ರತಾ ಪಡೆಗಳು ಬಂಡುಕೋರ ಗುಂಪುಗಳಿಗೆ ಸಹಕರಿಸಿವೆ ಎಂಬ ಕುಕಿ ಸಂಘಟನೆಯ ಆರೋಪವನ್ನು ಮಣಿಪುರ ಪೊಲೀಸರು ರವಿವಾರ ನಿರಾಕರಿಸಿದ್ದಾರೆ.
ಮೊರೆಹ್ ಪಟ್ಟಣ ಮ್ಯಾನ್ಮಾರ್ ಗಡಿಯಲ್ಲಿದೆ. ಮ್ಯಾನ್ಮಾರ್ ನ ದುಷ್ಕರ್ಮಿಗಳು ಮಣಿಪುರದಲ್ಲಿ ತೊಂದರೆ ನೀಡುತ್ತಿದ್ದಾರೆ ಎಂದು ರಾಜ್ಯ ಸರಕಾರ ಹೇಳಿದೆ.
‘‘ಮೊರೆಹ್ ನಲ್ಲಿ ಮಣಿಪುರದ ಬಂಡುಕೋರ ಗುಂಪುಗಳು ಹಾಗೂ ಭದ್ರತಾ ಪಡೆ ಸಿಬ್ಬಂದಿಯ ಸೋಗಿನಲ್ಲಿರುವ ಮೈತೈ ಉಗ್ರರ ನಡುವಿನ ಸಹಕಾರಕ್ಕೆ ಸಂಬಂಧಿಸಿ ಕಮಿಟಿ ಆನ್ ಟೈಬಲ್ ಯುನಿಟಿ (ಸಿಒಟಿಯು) ಹಾಗೂ ಕುಕಿ ಇನ್ಪಿ ಮಣಿಪುರದ ಆರೋಪ ಸತ್ಯವಲ್ಲ. ಆಧಾರ ರಹಿತ ಹಾಗೂ ದಾರಿತಪ್ಪಿಸುವ ಪ್ರಯತ್ನ’’ ಎಂದು ಮಣಿಪುರ ಪೊಲೀಸ್ ಹೇಳಿಕೆ ತಿಳಿಸಿದೆ.
ಮೊರೇಹ್ ನಲ್ಲಿ ಜನವರಿ 17ರಂದು ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಪೊಲೀಸ್ ಕಮಾಂಡೊಗಳು ಮೃತಪಟ್ಟಿದ್ದರು ಹಾಗೂ ಹಲವರು ಗಾಯಗೊಂಡಿದ್ದರು.
ಇನ್ನೊಂದೆಡೆ ಕುಕಿ ಸಂಘಟನೆಗಳು, ಶರಣಾಗತರಾಗಿರುವ ಕಣಿವೆ ಮೂಲದ ಬಂಡುಕೋರರಿಗೆ ರಾಜ್ಯ ಪೊಲೀಸರೊಂದಿಗೆ ಮುಕ್ತವಾಗಿ ಬೆರೆಯಲು ಅವಕಾಶ ನೀಡಲಾಗಿದೆ ಎಂದು ಆರೋಪಿಸಿದೆ.