ಮಣಿಪುರ: ಭದ್ರತಾ ಸಿಬ್ಬಂದಿ ಗುಂಡಿಗೆ ಓರ್ವ ಬಲಿ
ಇಂಫಾಲ : ಇಂಫಾಲ ಪೂರ್ವ ಜಿಲ್ಲೆಯ ಮಣಿಪುರ ಪೊಲೀಸ್ ತರಬೇತಿ ಕಾಲೇಜಿಗೆ (ಎಂಪಿಟಿಸಿ) ನುಗ್ಗಲು ಪ್ರಯತ್ನಿಸಿದ ಗ್ರಾಮ ಸ್ವಯಂಸೇವಕರ ಮೇಲೆ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಕನಿಷ್ಠ ಓರ್ವ ಮೃತಪಟ್ಟಿದ್ದಾನೆ.
ಈ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ. ಗ್ರಾಮ ಸ್ವಯಂ ಸೇವಕರೇ ಹೆಚ್ಚಿದ್ದ ದೊಡ್ಡ ಸಂಖ್ಯೆಯ ಸ್ಥಳೀಯ ಯುವಕರು ಗುಂಪೊಂದು ಎಂಪಿಟಿಸಿ ಗೇಟ್‌ನ ಮುಂದೆ ಸೇರಿದ್ದರು ಹಾಗೂ ಆವರಣದ ಒಳಗೆ ಪ್ರವೇಶಿಸಲು ಪ್ರಯತ್ನಿಸಿದರು. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಆರಂಭಲ್ಲಿ ಹಲವು ಸುತ್ತು ಅಶ್ರುವಾಯು ಸೆಲ್‌ಗಳನ್ನು ಸಿಡಿಸಿದರು. ಅನಂತರ ಗುಂಡು ಹಾರಿಸಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಗ್ರಾಮ ಸ್ವಯಂ ಸೇವಕರು ಶಸ್ತ್ರಾಸ್ತ್ರಗಳನ್ನು ದರೋಡೆ ಮಾಡಲು ಮಣಿಪುರ ಪೊಲೀಸ್ ತರಬೇತಿ ಕಾಲೇಜಿಗೆ ನುಗ್ಗಲು ಪ್ರಯತ್ನಿಸಿದ್ದಾರೆ ಎಂದು ಶಂಕಿಸಲಾಗಿದೆ. ಕೆಲವು ದಿನಗಳ ಹಿಂದೆ ಈ ಗ್ರಾಮ ಸ್ವಯಂ ಸೇವಕರು ಆಕ್ರಮಣಕಾರರ ವಿರುದ್ಧ ಹೋರಾಡಲು ಹೆಚ್ಚು ಶಸ್ತ್ರಾಸ್ತ್ರಗಳ ಅಗತ್ಯತೆ ಇದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದರು. ಆದರೆ, ಅವರ ಈ ಪ್ರಯತ್ನದ ಹಿಂದಿನ ಉದ್ದೇಶ ಇದುವರೆಗೆ ಬಹಿರಂಗವಾಗಿಲ್ಲ.
ಈ ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಒಕ್ರಾಮ್ ಸನಟನ್ (24) ಎಂದು ಗುರುತಿಸಲಾಗಿದೆ. ಭದ್ರತಾ ಸಿಬ್ಬಂದಿಯ ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಈತನನ್ನು ಇಂಫಾಲದಲ್ಲಿರುವ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಸಂದರ್ಭ ಮೃತಪಟ್ಟಿದ್ದಾನೆ ಎಂದು ಅವರು ತಿಳಿಸಿದ್ದಾರೆ.