ಮಣಿಪುರ: ಭದ್ರತಾ ಸಿಬ್ಬಂದಿ ಮೇಲೆ ಬಂಡುಕೋರರಿಂದ ದಾಳಿ
ಇಂಫಾಲ: ಮಣಿಪುರ ರಾಜ್ಯದ ಮೊರೆಹ್ನಲ್ಲಿರುವ ಚವಂಗ್ಫಾಯಿ ಪ್ರದೇಶದಲ್ಲಿ ಮಂಗಳವಾರ ಬಂಡುಕೋರರು ನಡೆಸಿದ ದಾಳಿಯಲ್ಲಿ ನಾಲ್ವರು ರಾಜ್ಯ ಪೊಲೀಸ್ ಕಮಾಂಡೊಗಳು ಮತ್ತು ಮೂವರು ಗಡಿ ಭದ್ರತಾ ಪಡೆ (ಬಿಎಸ್ಎಫ್) ಸಿಬ್ಬಂದಿ ಗಾಯಗೊಂಡಿದ್ದಾರೆ.
ಕಮಾಂಡೊಗಳು ಇಬ್ಬರು ನಿಶ್ಶಸ್ತ್ರಧಾರಿ ನಾಗರಿಕರನ್ನು ಅಪಹರಿಸುತ್ತಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಭದ್ರತಾ ಪಡೆಗಳು ಮತ್ತು ಅಜ್ಞಾತ ಬಂದೂಕುಧಾರಿಗಳ ನಡುವೆ ಗುಂಡುಗಳ ವಿನಿಮಯ ನಡೆಯಿತು ಎಂದು ಟೆಂಗ್ನೌಪ್ಲಾಲ್ ನಲ್ಲಿರುವ ಕುಕಿ ಸಂಘಟನೆಗಳ ಒಕ್ಕೂಟವೊಂದರ ವಕ್ತಾರ ಕೈಖೊಲಾಲ್ ಹಾವೊಕಿಪ್ ಹೇಳಿದರು.
ಭದ್ರತಾ ಸಿಬ್ಬಂದಿ ಮೇಲೆ ಅಪ್ರಚೋದಿತ ದಾಳಿ ನಡೆದಿದೆ ಎಂದು ಟೆಂಗ್ನೌಪ್ಲಾಲ್ ಜಿಲ್ಲಾಧಿಕಾರಿ ಕೃಷ್ಣ ಕುಮಾರ್ ತಿಳಿಸಿದರು. ಗಾಯಗೊಂಡಿರುವ ಭದ್ರತಾ ಸಿಬ್ಬಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ ಎಂದು ಅವರು ಹೇಳಿದರು.
ಐವರು ಸಿಬ್ಬಂದಿಯನ್ನು ಇಂಫಾಲಕ್ಕೆ ಹೆಲಿಕಾಪ್ಟರ್ನಲ್ಲಿ ಸಾಗಿಸಲಾಗಿದೆ. ಇತರ ಇಬ್ಬರಿಗೆ ಮೊರೆಹ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೊರೆಹ್ನಲ್ಲಿ ಡಿಸೆಂಬರ್ 31ರಂದೂ ಇಂಥದೇ ಘಟನೆ ನಡೆದಿತ್ತು. ಶಂಕಿತ ಬಂಡುಕೋರರು ಮೊರೆಹ್ನಲ್ಲಿರುವ ಪೊಲೀಸ್ ಕಮಾಂಡೊಗಳ ಬರಾಕ್ ಗಳ ಮೇಲೆ ದಾಳಿ ನಡೆಸಿದ್ದರು. ಆ ದಾಳಿಯಲ್ಲಿ ರಾಜ್ಯ ಪೊಲೀಸ್ ಪಡೆಯ ಐವರು ಕಮಾಂಡೊಗಳು ಗಾಯಗೊಂಡಿದ್ದರು.