ಛಿದ್ರವಾಗಿರುವ ಮಣಿಪುರಕ್ಕೆ ಇನ್ನೂ ಭೇಟಿ ನೀಡದ ಪ್ರಧಾನಿ ಮೋದಿ: ಸಂಸದ ಡೆರಿಕ್ ಒಬ್ರಿಯಾನ್ ಟೀಕೆ
Update: 2024-01-21 15:33 GMT
ಹೊಸದಿಲ್ಲಿ: ಮಣಿಪುರ 8 ತಿಂಗಳಿಂದ ಛಿದ್ರವಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೆ ರಾಜ್ಯಕ್ಕೆ ಭೇಟಿ ನೀಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರಿಕ್ ಒಬ್ರಿಯಾನ್ ಅವರು ಹೇಳಿದ್ದಾರೆ.
ಅವರು ಮಣಿಪುರದ ರಾಜ್ಯ ಸ್ಥಾಪನಾ ದಿನವಾದ ರವಿವಾರ ‘ಎಕ್ಸ್’ನ ಪೋಸ್ಟ್ ನಲ್ಲಿ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, ತಾನು ರಾಜ್ಯ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
‘‘ಜನವರಿ 21 ಮಣಿಪುರ, ಮೇಘಾಲಯ ಹಾಗೂ ತ್ರಿಪುರಾ ರಾಜ್ಯಗಳು ಸ್ಥಾಪನೆಯಾದ ದಿನ’’ ಎಂದು ಡೆರಿಕ್ ಒಬ್ರಿಯಾನ್ ಹೇಳಿದ್ದಾರೆ.
ಮಣಿಪುರ ಕಳೆದ ವರ್ಷ ಮೇಯಿಂದ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಇದರ ಪರಿಣಾಮ 180ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಪರಿಶಿಷ್ಟ ಪಂಗಡ ಸ್ಥಾನ ಮಾನ ನೀಡುವಂತೆ ಆಗ್ರಹಿಸಿದ ಮೈತೈ ಸಮುದಾಯದವರನ್ನು ವಿರೋಧಿಸಿ ಮಣಿಪುರದ ಹಲವು ಜಿಲ್ಲೆಗಳಲ್ಲಿ ಮೇ 3ರಂದು ನಡೆದ ‘ಬುಡಕಟ್ಟು ಐಕಮತ್ಯರ್ಯಾಲಿ’ಯ ಹಿನ್ನೆಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.