ಮಣಿಪುರ: ಜಿಲ್ಲೆ ತೊರೆಯುವಂತೆ ಎಸ್ಪಿ, ಜಿಲ್ಲಾಧಿಕಾರಿಗೆ ಬುಡಕಟ್ಟು ಒಕ್ಕೂಟ ಗಡುವು
ಇಂಫಾಲ: ಮಣಿಪುರದ ಚುರಚಾಂದ್ಪುರ ಜಿಲ್ಲೆಯ ಪೊಲೀಸ್ ಸೂಪರಿಂಟೆಂಡೆಂಟ್ ಶಿವಾನಂದ ಸುರ್ವೆ ಮತ್ತು ಜಿಲ್ಲಾಧಿಕಾರಿ ಎಸ್. ಧರುಣ್ ಕುಮಾರ್ 24 ಗಂಟೆಗಳೊಳಗೆ ಜಿಲ್ಲೆಯನ್ನು ತೊರೆಯಬೇಕು ಎಂದು ‘ಮೂಲನಿವಾಸಿ ಬುಡಕಟ್ಟು ನಾಯಕರ ವೇದಿಕೆ’ ಶುಕ್ರವಾರ ಗಡುವು ವಿಧಿಸಿದೆ. ಕುಕಿ-ರೆ ಸಮುದಾಯಕ್ಕೆ ಸೇರಿರುವ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬರ ಅಮಾನತನ್ನು ವಿರೋಧಿಸಿ ಚುರಚಾಂದ್ಪುರ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯ ವೇಳೆ ಇಬ್ಬರು ಮೃತಪಟ್ಟ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.
ಈ ಇಬ್ಬರೂ ಅಧಿಕಾರಿಗಳು ಮಣಿಪುರ ಕೇಡರಿಗೆ ಸೇರಿದವರು. ಅವರ ಸ್ಥಾನದಲ್ಲಿ ಕೇಂದ್ರಾಡಳಿತ ಪ್ರದೇಶ ಕೇಡರಿನ ಅಧಿಕಾರಿಗಳನ್ನು ನೇಮಿಸಬೇಕು ಮತ್ತು ಆ ಅಧಿಕಾರಿಗಳು ‘‘ಕುಕಿ-ರೊ ಸಮುದಾಯಕ್ಕೆ ಸೇರಿದವರಾಗಿರಬೇಕು’’ ಎಂದು ಕುಕಿ-ರೆ ಸಮುದಾಯದ ಸಂಘಟನೆಗಳ ಒಕ್ಕೂಟವಾಗಿರುವ ‘ಮೂಲನಿವಾಸಿ ಬುಡಕಟ್ಟು ನಾಯಕರ ವೇದಿಕೆ’ ಹೇಳಿದೆ.
ಗುರುವಾರ, ಪೊಲೀಸ್ ಸೂಪರಿಂಟೆಂಡೆಂಟ್ ಮತ್ತು ಜಿಲ್ಲಾಧಿಕಾರಿ ಕಚೇರಿಗಳನ್ನು ಒಳಗೊಂಡ ಸರಕಾರಿ ಕಟ್ಟಡಗಳ ಸಂಕೀರ್ಣದೊಳಗೆ ಗುಂಪೊಂದು ನುಗ್ಗಿ ನಡೆಸಿದ ದಾಂಧಲೆಯ ವೇಳೆ ಇಬ್ಬರು ಮೃತಪಟ್ಟಿದ್ದರು ಮತ್ತು 30 ಮಂದಿ ಗಾಯಗೊಂಡಿದ್ದರು. ಭದ್ರತಾ ಪಡೆಗಳು ಮತ್ತು ಪೊಲೀಸ್ ಸೂಪರಿಂಟೆಂಡೆಂಟ್ ಅವರ ಕಚೇರಿಯ ಅಧಿಕಾರಿಗಳು ಬಳಸುವ ಹಲವಾರು ಬಸ್ ಗಳು ಮತ್ತು ಟ್ರಕ್ ಗಳಿಗೆ ಗುಂಪು ಬೆಂಕಿ ಕೊಟ್ಟಿತ್ತು.
ಬುಧವಾರ ‘‘ಶಸ್ತ್ರಧಾರಿ ದುಷ್ಕರ್ಮಿಗಳೊಂದಿಗೆ’’ ಪೋಸ್ ನೀಡುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ಹೆಡ್ ಕಾನ್ಸ್ಟೇಬಲ್ ಸಿಯಾಮ್ಲಾಲ್ ಪೌಲ್ರನ್ನು ಅಮಾನತುಗೊಳಿಸಲಾಗಿತ್ತು. ಇದು ಗಂಭೀರ ಅಶಿಸ್ತಾಗಿದೆ ಎಂದು ಅಮಾನತು ಆದೇಶದಲ್ಲಿ ಪೊಲೀಸರು ತಿಳಿಸಿದ್ದಾರೆ.