ಮಣಿಪುರ | ʼನನ್ನ ಪತಿಯನ್ನು ಜೀವಂತವಾಗಿ ಒಪ್ಪಿಸಿʼ: ನಾಪತ್ತೆಯಾದ ಮೈತೈ ವ್ಯಕ್ತಿಯ ಪತ್ನಿಯಿಂದ ಅನಿರ್ದಿಷ್ಠಾವಧಿ ಧರಣಿ
ಮಣಿಪುರ: ʼನನ್ನ ಪತಿಯನ್ನು ನನಗೆ ಸುರಕ್ಷಿತವಾಗಿ ಒಪ್ಪಿಸುವವರೆಗೆ ನಾನು ಇಲ್ಲಿಂದ ಕದಲುವುದಿಲ್ಲʼ ಎಂದು ನಾಪತ್ತೆಯಾಗಿರುವ ಮೈತೈ ವ್ಯಕ್ತಿಯೋರ್ವನ ಪತ್ನಿ ಮಣಿಪುರದ ಕಾಂಗ್ ಪೋಕ್ಪಿಯ ಮಿಲಿಟರಿ ಸ್ಟೇಷನ್ ಬಳಿ ಮುಳ್ಳು ತಂತಿಯ ಬ್ಯಾರಿಕೇಡ್ ಬಳಿ ಪ್ರತಿಭಟನೆ ಕುಳಿತುಕೊಂಡಿದ್ದಾರೆ.
ನವೆಂಬರ್ 25ರಂದು ಕಾಂಗ್ಪೋಕ್ಪಿ ಜಿಲ್ಲೆಯ ಲೀಮಾಖೋಂಗ್ ಮಿಲಿಟರಿ ಸ್ಟೇಷನ್ ನಲ್ಲಿ ಗುತ್ತಿಗೆದಾರನೋರ್ವನ ಸಹಾಯಕನಾಗಿದ್ದ ಲೈಶ್ರಾಮ್ ಕಮಲ್ ಬಾಬು ನಾಪತ್ತೆಯಾಗಿದ್ದಾರೆ. ಆ ಬಳಿಕ ಬಾಬು ಪತ್ನಿ ಬೆಲರಾನಿ ನೇತೃತ್ವದಲ್ಲಿ ಮಹಿಳಾ ಪ್ರತಿಭಟನಾಕಾರರು ಬ್ಯಾರಿಕೇಡ್ ಗಳನ್ನು ತೆಗೆದುಹಾಕಿ ಸೇನಾ ಶಿಬಿರದ ಕಡೆಗೆ ಮೆರವಣಿಗೆ ನಡೆಸಿದ್ದರಿಂದ ಉದ್ವಿಗ್ನತೆ ಉಂಟಾಗಿತ್ತು.
ಸೋಮವಾರ ಮಧ್ಯಾಹ್ನದಿಂದ ಪತಿ ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಬಾಬು ಪತ್ನಿ ಬೆಲರಾನಿ ಹೇಳಿದ್ದಾರೆ. ನಾನು ನ. 25ರಿಂದ ಅವರೊಂದಿಗೆ ಸಂವಹನ ನಡೆಸಲು ಪ್ರಯತ್ನಿಸಿದ್ದೇನೆ. ಆದರೆ ಅವರ ಫೋನ್ ಆಫ್ ಆಗಿದೆ. ನನ್ನ ಪತಿ ಕಾಣೆಯಾಗಿದ್ದಾರೆಂದು ತಿಳಿದು ನಾನು ಕ್ಯಾಚಾರ್ನಿಂದ ಬಂದಿದ್ದೇನೆ. ಸೇನಾ ಸಿಬ್ಬಂದಿ ನನ್ನ ಪತಿಯನ್ನು ಹುಡಕಿ ಜೀವಂತವಾಗಿ ಮತ್ತು ಸುರಕ್ಷಿತವಾಗಿ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಅಸ್ಸಾಂನ ಕ್ಯಾಚಾರ್ ಜಿಲ್ಲೆಯ ನಿವಾಸಿಯಾಗಿರುವ ಬಾಬು, ಲೊಯಿಟಾಂಗ್ ಖುನೌನಲ್ಲಿರುವ ತನ್ನ ಸಹೋದರನ ಮನೆಯಲ್ಲಿ ತಂಗಿದ್ದರು. ಬಾಬು ನಾಪತ್ತೆ ಘಟನೆಯು ಇಂಫಾಲ್ ಕಣಿವೆಯಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ನಾಪತ್ತೆಯಾದ ವ್ಯಕ್ತಿಯ ಪತ್ತೆ ಮಾಡುವಂತೆ ಸೇನಾಧಿಕಾರಿಗಳಿಗೆ ತಿಳಿಸಿದ್ದಾರೆ.