ಒಗ್ಗಟ್ಟಿನ ಮಂತ್ರ | ಹಿಂದೂ ಮಹಿಳೆಯನ್ನು ಸರಪಂಚ್ ಆಗಿ ಚುನಾಯಿಸಿದ ಮುಸ್ಲಿಂ ಪ್ರಾಬಲ್ಯದ ಹರ್ಯಾಣ ಪಂಚಾಯತಿ

pc : thehindu.com
ಗುರುಗ್ರಾಮ: “ಒಗ್ಗಟ್ಟಿನಲ್ಲಿ ಬಲವಿದೆ” ಎಂಬುದು ಪುರಾತನ ನಾಣ್ಣುಡಿ. ಈ ನಾಣ್ಣುಡಿಗೆ ಗೌರವ ತರುವಂತೆ ಹರ್ಯಾಣದ ನೂಹ್ ಜಿಲ್ಲೆಯ ಮುಸ್ಲಿಂ ಪ್ರಾಬಲ್ಯದ ಸಿರೋಲಿ ಗ್ರಾಮದಲ್ಲಿ ಗ್ರಾಮದ ಏಕೈಕ ಹಿಂದೂ ಮಹಿಳಾ ಪಂಚಾಯತಿ ಸದಸ್ಯೆಯನ್ನು ಸರಪಂಚರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಪ್ರಿಲ್ 2ರಂದು 32 ವರ್ಷದ ನಿಶಾ ಚೌಹಾಣ್ ಅವರನ್ನು ಸಿರೋಲಿ ಸರಪಂಚರನ್ನಾಗಿ ಆಯ್ಕೆ ಮಾಡಲಾಗಿದೆ.
ಹಿರಿಯ ಪಂಚಾಯತಿ ಅಧಿಕಾರಿಯೊಬ್ಬರ ಪ್ರಕಾರ, ಪುನಹಾನ ಬ್ಲಾಕ್ ಅಡಿ ಬರುವ ಸಿರೋಲಿ ಪಂಚಾಯತಿಯು 15 ಮಂದಿ ಸದಸ್ಯ ಬಲವನ್ನು ಹೊಂದಿದ್ದು, ಈ ಪೈಕಿ 14 ಮಂದಿ ಮುಸ್ಲಿಂ ಸದಸ್ಯರು. ಈ ಪೈಕಿ ಒಟ್ಟು ಎಂಟು ಮಂದಿ ಮಹಿಳಾ ಸದಸ್ಯರಿದ್ದಾರೆ. ಸಿರೋಲಿಯ ಸರಪಂಚ್ ಹುದ್ದೆಯನ್ನು ಮಹಿಳೆಗೆ ಮೀಸಲಿರಿಸಲಾಗಿತ್ತು.
ಸಿರೋಲಿ ಗ್ರಾಮದಲ್ಲಿನ 3,296 ಮತದಾರರ ಪೈಕಿ 250 ಮತದಾರರು ಮಾತ್ರ ಹಿಂದೂಗಳಾಗಿದ್ದಾರೆ. ಪಂಚಾಯತಿ ಅಧಿಕಾರಿ ನಾಸೀಂ ಪ್ರಕಾರ, ಡಿಸೆಂಬರ್ 2022ರಲ್ಲಿ ಪಂಚಾಯತಿ ಚುನಾವಣೆ ನಡೆದಿತ್ತು. ಆದರೆ, ವಿಜೇತ ಅಭ್ಯರ್ಥಿ ಸಹನಾರ ಶೈಕ್ಷಣಿಕ ದಾಖಲೆಗಳು ನಕಲಿ ಎಂದು ಪತ್ತೆಯಾದ ನಂತರ, ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು ಎಂದು ತಿಳಿಸಿದ್ದಾರೆ.
ತಮ್ಮ ಆಯ್ಕೆಯ ಕುರಿತು ಪ್ರತಿಕ್ರಿಯಿಸಿದ ನೂತನ ಸರಪಂಚೆ ನಿಶಾ ಚೌಹಾಣ್, ನನ್ನ ಗೆಲುವು ಹಿಂದೂ-ಮುಸ್ಲಿಂ ಒಗ್ಗಟ್ಟಿನ ಸಂಕೇತ ಎಂದು ಹೇಳಿದ್ದಾರೆ.
“ನನ್ನ ಗ್ರಾಮವು ಮುಸ್ಲಿಂ ಬಾಹುಳ್ಯದ ಗ್ರಾಮವಾಗಿದ್ದರೂ, ಹಿಂದೂ-ಮುಸ್ಲಿಂ ಭ್ರಾತೃತ್ವದ ಹಳೆ ಪರಂಪರೆ ಇನ್ನೂ ಅಸ್ತಿತ್ವದಲ್ಲಿದೆ. ನಿಜವಾಗಿಯೂ ಹೇಳುವುದಾದರೆ, ಮೇವಾತ್ ಪ್ರದೇಶದಲ್ಲಿ ಯಾವುದೇ ಧಾರ್ಮಿಕ ತಾರತಮ್ಯವಿಲ್ಲ. ಈ ಮಾತಿಗೆ ನಾನು ಚುನಾವಣೆಯಲ್ಲಿ ಸರಪಂಚಳಾಗಿ ಆಯ್ಕೆಯಾಗಿರುವುದೇ ನಿದರ್ಶನ. ನನ್ನ ಗೆಲುವು ಇಡೀ ಪ್ರದೇಶದಲ್ಲಿನ ಕೋಮು ಭ್ರಾತೃತ್ವದ ಸಂದೇಶವಾಗಿದೆ” ಎಂದು ಅವರು ಪ್ರತಿಪಾದಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಸಿರೋಲಿಯ ಮಾಜಿ ಸರಪಂಚ್ ಹಾಗೂ ಹಾಲಿ ವಾರ್ಡ್ ಸದಸ್ಯ ಅಶ್ರಫ್, ಉತ್ತಮ ಆಡಳಿತದ ಬಯಕೆಯಲ್ಲಿ ನಿಶಾ ಚೌಹಾಣ್ ರನ್ನು ಸರಪಂಚರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
“ಇಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು ಸೌಹಾರ್ದದಿಂದ ಜೀವಿಸುತ್ತಿದ್ದಾರೆ. ನಾವೆಲ್ಲರೂ ಪರಸ್ಪರ ಸಂತೋಷ ಹಾಗೂ ದುಃಖದಲ್ಲಿ ಸಂಪೂರ್ಣವಾಗಿ ಭಾಗಿಯಾಗುತ್ತೇವೆ” ಎಂದೂ ಅವರು ಹೇಳಿದ್ದಾರೆ.