ಮಹಿಳೆಯರಿಗೆ ಮುಟ್ಟು ಪ್ರತಿಬಂಧಕವಲ್ಲ; ವೇತನ ಸಹಿತ ರಜೆ ಅನಗತ್ಯ: ಸ್ಮೃತಿ ಇರಾನಿ

Update: 2023-12-14 03:02 GMT

ಹೊಸದಿಲ್ಲಿ: ಮಹಿಳೆಯರಿಗೆ ಋತುಚಕ್ರ ಸಹಜ ಪ್ರಕ್ರಿಯೆ; ಇದನ್ನು ಪ್ರತಿಬಂಧಕ ಎಂದು ಪರಿಗಣಿಸಲಾಗದು. ಆದ್ದರಿಂದ ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರಿಗೆ ವೇತನ ಸಹಿತ ರಜೆ ಮಂಜೂರು ಮಾಡುವ ಯಾವುದೇ ನೀತಿಯ ಅಗತ್ಯ ಇಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಸ್ಮೃತಿ ಇರಾನಿ ರಾಜ್ಯಸಭೆಯಲ್ಲಿ ಬುಧವಾರ ಹೇಳಿದ್ದಾರೆ.

ಮುಟ್ಟಿನ ರಜೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು "ಮುಟ್ಟಾಗುವ ಮಹಿಳೆಯಾಗಿ, ಮುಟ್ಟು ಅಥವಾ ಋತುಚಕ್ರ ಪ್ರತಿಬಂಧಕ ಎಂದು ನನಗೆ ಅನಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

"ಇದು ಮಹಿಳೆಯರ ಜೀವನ ಪಯಣದ ಸಹಜ ಭಾಗ. ಇಂದು ಮಹಿಳೆಯರು ಹೆಚ್ಚಾಗಿ ಆರ್ಥಿಕ ಅವಕಾಶಗಳನ್ನು ನೋಡುತ್ತಿದ್ದು, ಈ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯವನ್ನು ಹೇಳುತ್ತಿದ್ದೇನೆ. ನಾನು ಸಚಿವಾಲಯದ ಅಧಿಕೃತ ಹೇಳಿಕೆ ನೀಡುತ್ತಿಲ್ಲ" ಎಂದರು.

ರಾಜ್ಯಸಭೆ ಪ್ರಶ್ನೋತ್ತರ ಅವಧಿಯಲ್ಲಿ ಆರ್ ಜೆಡಿ ಸದಸ್ಯ ಮನೋಜ್ ಕುಮಾರ್ ಝಾ ಹೇಳಿದ ಪೂರಕ ಪ್ರಶ್ನೆಗೆ ಉತ್ತರಿಸಿದ ಅವರು ಈ ಅಂಶವನ್ನು ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ಮಾತನಾಡಿದ ಮನೋಜ್ ಕುಮಾರ್, 1990ರ ದಶಕದಲ್ಲಿ ಮುಟ್ಟಿನ ರಜೆಯನ್ನು ಮಂಜೂರು ಮಾಡಿದ ಮೊದಲ ರಾಜ್ಯ ಬಿಹಾರ. ಬಳಿಕ ಇದನ್ನು ಕೇರಳ ಜಾರಿಗೆ ತಂದಿತು ಎಂದು ಸಭೆಯ ಗಮನಕ್ಕೆ ತಂದರು.

ಮಹಿಳಾ ಉದ್ಯೋಗಿಗಳಿಗೆ ಮುಟ್ಟಿನ ಸಂದರ್ಭದಲ್ಲಿ ಪಾವತಿ ಸಹಿತ ರಜೆಯನ್ನು ಮಂಜೂರು ಮಾಡುವಂತೆ ಉದ್ಯೋಗದಾತರಿಗೆ ಕಡ್ಡಾಯಪಡಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆಯೇ ಎಂದು ಪ್ರಶ್ನಿಸಿದರು.

ಯಾವುದೇ ಉದ್ಯೋಗ ಸ್ಥಳಗಳಲ್ಲಿ ಮುಟ್ಟಿನ ರಜೆಯನ್ನು ಕಡ್ಡಾಯಪಡಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕಾಂಗ್ರೆಸ್ ಸದಸ್ಯ ಶಶಿ ತರೂರ್ ಅವರ ಪ್ರಶ್ನೆಗೆ ಲೋಕಸಭೆಯಲ್ಲಿ ಇರಾನಿ ಉತ್ತರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News