ಮುಸ್ಲಿಮರನ್ನು ಗುರಿಯಾಗಿಸಿದ ಜಾಹೀರಾತುಗಳಿಗೆ ಅನುಮತಿ ನೀಡಿ, ಮೋದಿಯನ್ನು ಗುರಿಯಾಗಿಸಿದ ಜಾಹೀರಾತನ್ನು ನಿರಾಕರಿಸಿದ ಮೆಟಾ: ವರದಿ

Update: 2024-05-21 11:05 GMT

 ಮೆಟಾ | PC : FACEBOOK

ಹೊಸದಿಲ್ಲಿ: ಭಾರತದಲ್ಲೀಗ ಲೋಕಸಭಾ ಚುನಾವಣೆಗಳು ನಡೆಯುತ್ತಿದ್ದು, ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌(AI)) ಆಧಾರಿತ ವಿಡಿಯೊಗಳ ಮೂಲಕ ಹರಡಲಾಗುತ್ತಿರುವ ಸುಳ್ಳು ಮಾಹಿತಿಗಳು ಬಹುದೊಡ್ಡ ಬೆದರಿಕೆಯಾಗಿ ಉದ್ಭವಿಸಿವೆ.

ವರದಿಯೊಂದರ ಪ್ರಕಾರ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಪ್ಪು ಮಾಹಿತಿಗಳನ್ನು ಹರಡಲು ಕೃತಕ ಬುದ್ಧಿಮತ್ತೆಯನ್ನು ಬಳಸಿ ನಿರ್ಮಿಸಲಾಗಿರುವ ಹಲವಾರು ರಾಜಕೀಯ ಜಾಹೀರಾತುಗಳನ್ನು ಮೆಟಾ ಅನುಮೋದಿಸಿದೆ. ಮುಸ್ಲಿಮರನ್ನು ಗುರಿಯಾಗಿಸಿಕೊಂಡಿರುವ ಜಾಹೀರಾತುಗಳಿಗೆ ಅನುಮತಿ ನೀಡಿದ್ದ ಮೆಟಾ, ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ತಪ್ಪು ಮಾಹಿತಿ ಇದ್ದ ಜಾಹೀರಾತೊಂದನ್ನು ನಿಯಮಗಳನ್ನು ಉಲ್ಲಂಘಿಸಿದೆ ಎಂದು ಜಾಹಿರಾತಿಗೆ ಅನುಮತಿಯನ್ನು ಮೆಟಾ ನಿರಾಕರಿಸಿದೆ ಎಂದು deccanherald.com ವರದಿ ಮಾಡಿದೆ.

“ಈ ವಿಷಜಂತುಗಳನ್ನು ಸುಟ್ಟು ಹಾಕಬೇಕು” ಹಾಗೂ “ಹಿಂದೂಗಳ ರಕ್ತ ಚೆಲ್ಲಾಡುತ್ತಿದೆ. ಈ ಆಕ್ರಮಣಕೋರರನ್ನು ಸುಟ್ಟು ಹಾಕಲೇಬೇಕು” ಎಂಬಂತಹ ಮುಸ್ಲಿಮರ ವಿರುದ್ಧ ನಿಂದನೆಗಳನ್ನು ಹೊಂದಿರುವ ಜಾಹೀರಾತುಗಳನ್ನು ಫೇಸ್ ಬುಕ್ ಅನುಮೋದಿಸಿದೆ ಎಂದು ವರದಿಯಾಗಿದೆ. ಕೆಲ ರಾಜಕೀಯ ನಾಯಕರ ಬಗ್ಗೆ ತಪ್ಪು ಮಾಹಿತಿ ಇರುವ ಜಾಹೀರಾತುಗಳನ್ನು ಕೂಡ ಫೇಸ್‌ಬುಕ್ ಅನುಮೋದಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಅನುಮೋದಿಸಿದ ಮತ್ತೊಂದು ಜಾಹೀರಾತಿನಲ್ಲಿ ವಿರೋಧ ಪಕ್ಷದ ನಾಯಕನೊಬ್ಬರನ್ನು ಹತ್ಯೆಗೈಯ್ಯಲು ಕರೆ ನೀಡಲಾಗಿತ್ತು. ಅದರಲ್ಲಿ ಭಾರತದಿಂದ ಹಿಂದೂಗಳನ್ನು ಅಳಿಸಿಹಾಕುಲು ಅವರು ಬಯಸಿದ್ದಾರೆ ಎಂದು ಸುಳ್ಳಾಗಿ ಬಿಂಬಿಸಲಾಗಿತ್ತು. ಈ ಜಾಹೀರಾತಿನ ಸಂದೇಶದ ಪಕ್ಕದಲ್ಲಿ ಪಾಕಿಸ್ತಾನದ ಧ್ವಜದ ಚಿತ್ರವನ್ನು ನೀಡಲಾಗಿತ್ತು.

ಚುನಾವಣಾ ಆಯೋಗದ ಸೂಚನೆಯ ನಂತರ ಬಿಜೆಪಿಯ ಕರ್ನಾಟಕ ಘಟಕವು ಹಂಚಿಕೊಂಡಿದ್ದ ಅನಿಮೇಟೆಡ್ ವಿಡಿಯೊವನ್ನು ಎಕ್ಸ್ ಸಾಮಾಜಿಕ ಮಾಧ್ಯಾಮವು ಇತ್ತೀಚೆಗೆ ತೆಗೆದು ಹಾಕಿದ ನಂತರ ಈ ವರದಿ ಬಹಿರಂಗಗೊಂಡಿದೆ.

ಇಂಡಿಯಾ ಸಿವಿಲ್ ವಾಚ್ ಇಂಟರ್ ನ್ಯಾಶನಲ್ ಹಾಗೂ ಕಾರ್ಪೊರೇಟ್ ಉತ್ತರದಾಯಿತ್ವ ಸಂಘಟನೆಯಾದ ಎಕೊ ಈ ಜಾಹೀರಾತುಗಳನ್ನು ಸೃಷ್ಟಿಸಿ, ಮೆಟಾ ಜಾಹೀರಾತು ಲೈಬ್ರರಿಗೆ ಸಲ್ಲಿಸಿದ್ದು, ಹಾನಿಕಾರಕ ರಾಜಕೀಯ ತುಣುಕನ್ನು ಪತ್ತೆ ಹಚ್ಚಿ, ಅವುಗಳನ್ನು ನಿರ್ಬಂಧಿಸಲು ಕಂಪನಿಯ ಬಳಿ ಇರುವ ತಾಂತ್ರಿಕತೆಯ ಪರೀಕ್ಷೆ ನಡೆಸಬೇಕು ಎಂದು ಮನವಿ ಮಾಡಿದ್ದವು.

ಇಂಡಿಯಾ ಸಿವಿಲ್ ವಾಚ್ ಇಂಟರ್‌ನ್ಯಾಶನಲ್ (ICWI) ಹಾಗೂ ಕಾರ್ಪೋರೇಟ್‌ ಸಂಸ್ಥೆ Ekō ಹಾನಿಕಾರಕ ರಾಜಕೀಯ ವಿಷಯವನ್ನು ಪತ್ತೆಹಚ್ಚಲು ಮತ್ತು ನಿರ್ಬಂಧಿಸಲು ಮೆಟಾದ ಜಾಹೀರಾತು ಗ್ರಂಥಾಲಯಕ್ಕೆ ಈ ಜಾಹೀರಾತುಗಳನ್ನು ಸಲ್ಲಿಸಿದೆ. ಈ ಎಲ್ಲಾ ಜಾಹೀರಾತುಗಳು ನಿಜವಾದ ದ್ವೇಷದ ಮಾತು ಮತ್ತು ಭಾರತದಲ್ಲಿ ಪ್ರಚಲಿತದಲ್ಲಿರುವ ತಪ್ಪು ಮಾಹಿತಿಯನ್ನು ಆಧರಿಸಿ ರಚಿಸಲಾಗಿದೆ. ಇಂತಹ ತಪ್ಪು ನಿರೂಪಣೆಗಳನ್ನು ವೃದ್ಧಿಸುವಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳ ಸಾಮರ್ಥ್ಯವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಂಗ್ಲಿಷ್, ಹಿಂದಿ, ಗುಜರಾತಿ, ಬೆಂಗಾಳಿ ಮತ್ತು ಕನ್ನಡದಲ್ಲಿ 22 ಜಾಹೀರಾತುಗಳನ್ನು ಸಂಶೋಧಕರು ಮೆಟಾಗೆ ಸಲ್ಲಿಸಿದ್ದಾರೆ, ಅದರಲ್ಲಿ 14 ಜಾಹೀರಾತನ್ನು ಅನುಮೋದಿಸಲಾಗಿದೆ. ಇನ್ನೂ ಮೂರು ಜಾಹೀರಾತುಗಳನ್ನು ಸಣ್ಣ ಮಟ್ಟದಲ್ಲಿ ಅನುಮೋದಿಸಲಾಗಿದೆ. ಅನುಮೋದಿತ ಎಲ್ಲಾ ಜಾಹೀರಾತುಗಳಲ್ಲಿ AI ಮೂಲಕ ತಿರುಚಿದ ಚಿತ್ರಗಳನ್ನು ಪತ್ತೆ ಹಚ್ಚಲು ಮೆಟಾ ವಿಫಲವಾಗಿದೆ ಎಂದು ಸಂಶೋಧನೆಯು ಪತ್ತೆ ಹಚ್ಚಿದೆ.

ಈ ಆರೋಪಕ್ಕೆ ಪ್ರತಿಯಾಗಿ, ಜಾಹೀರಾತುದಾರರು ತಾವು ಯಾವ ಬಗೆಯ ಕೃತಕ ಬುದ್ಧಿಮತ್ತೆಯನ್ನು ಬಳಸಿದ್ದೇವೆ ಎಂಬ ಕುರಿತು ಬಹಿರಂಗಪಡಿಸುವುದು ಅಗತ್ಯವಾಗಿದೆ ಎಂದು ಮೆಟಾ ಸಂಸ್ಥೆ ಸ್ಪಷ್ಟನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News