ಕಾಂಗ್ರೆಸ್ ತೊರೆದು ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಸೇರಿದ ಮಿಲಿಂದ್ ದಿಯೋರಾ
ಮುಂಬೈ: ಕಾಂಗ್ರೆಸ್ನೊಂದಿಗೆ ತನ್ನ ದಶಕಗಳಷ್ಟು ಹಳೆಯ ಸಂಬಂಧವನ್ನು ರವಿವಾರ ಕಡಿದುಕೊಂಡ ಮಾಜಿ ಕೇಂದ್ರ ಸಚಿವ ಮಿಲಿಂದ ದಿಯೋರಾ ಅವರು ಇಲ್ಲಿ ಏಕನಾಥ ಶಿಂದೆ ನೇತೃತ್ವದ ಶಿವಸೇನೆಗೆ ವಿಧ್ಯುಕ್ತವಾಗಿ ಸೇರ್ಪಡೆಗೊಂಡರು.
ದಿಯೋರಾ ಇಲ್ಲಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ‘ವರ್ಷಾ’ದಲ್ಲಿ ಶಿಂದೆಯವರನ್ನು ಭೇಟಿಯಾದ ಬಳಿಕ ಈ ಪ್ರಕಟಣೆ ಹೊರಬಿದ್ದಿದೆ.
ದಿಯೋರಾ ತನ್ನ ಪಕ್ಷವನ್ನು ಸೇರಲು ಬಯಸಿದರೆ ಅವರನ್ನು ಸ್ವಾಗತಿಸುವುದಾಗಿ ಶಿಂದೆ ಈ ಮುನ್ನ ಹೇಳಿದ್ದರು.
ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಮುರಳಿ ದಿಯೋರಾ ಅವರ ಪುತ್ರ ಮಿಲಿಂದ ದೇವರಾ ‘ಸುದೀರ್ಘ ಮತ್ತು ನಿರರ್ಥಕ ’ಕಾಯುವಿಕೆಯ ಬಳಿಕ ಕಾಂಗ್ರೆಸ್ ನೊಂದಿಗೆ ತನ್ನ ಕುಟುಂಬದ 55 ವರ್ಷಗಳ ಸಂಬಂಧಕ್ಕೆ ಮಂಗಳ ಹಾಡಿದ್ದಾರೆ ಎಂದು ಅವರಿಗೆ ನಿಕಟವಾಗಿರುವ ಮೂಲಗಳು ತಿಳಿಸಿದವು.
ತಾನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಮತ್ತು ಅಭಿವೃದ್ಧಿಯ ಪಥವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ದಕ್ಷಿಣ ಮುಂಬೈನ ಮಾಜಿ ಸಂಸದ ದಿಯೋರಾ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಪತ್ನಿ ಪೂಜಾರೊಂದಿಗೆ ಪ್ರಭಾದೇವಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಲು ಮನೆಯಿಂದ ಹೊರಗಡಿಯಿರಿಸಿದ ದಿಯೋರಾ ‘ನಾನು ಅಭಿವೃದ್ಧಿಯ ಪಥದಲ್ಲಿ ನಡೆಯಲು ಮುಂದಾಗಿದ್ದೇನೆ ’ ಎಂದು ಅಲ್ಲಿ ಕಾದು ನಿಂತಿದ್ದ ಸುದ್ದಿಗಾರರಿಗೆ ತಿಳಿಸಿದರು.
ಶಿವಸೇನೆ (ಠಾಕ್ರೆ ಬಣ) ದಕ್ಷಿಣ ಮುಂಬೈ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಬಹಿರಂಗವಾಗಿ ಹೇಳಿಕೊಳ್ಳುತ್ತಿದೆ ಮತ್ತು ದೇವರಾ ಅವರ ಸ್ಥಾನದ ಸುರಕ್ಷತೆಗೆ ಕಾಂಗ್ರೆಸ್ ಯಾವುದೇ ಭರವಸೆಯನ್ನು ನೀಡಿಲ್ಲ. ಯುವ ನಾಯಕನೋರ್ವನ ರಾಜಕೀಯ ಭವಿಷ್ಯವನ್ನು ಅನಿಶ್ಚಿತತೆಗೆ ತಳ್ಳಲಾಗಿದ್ದು,ಯಾವುದೇ ಪರಿಹಾರವೂ ಕಂಡು ಬರುತ್ತಿಲ್ಲ ಎಂದು ದೇವರಾ ಆಪ್ತರು ತಿಳಿಸಿದರು.
ರಾಹುಲ್ ಗಾಂಧಿಯವರನ್ನು ಭೇಟಿಯಾಗಲೂ ದಿಯೋರಾಗೆ ಅಸಾಧ್ಯವಾಗಿತ್ತು. ಪಕ್ಷದಲ್ಲಿ ಅವರಿಗೆ ಉಸಿರುಗಟ್ಟಿಸುವ ವಾತಾವರಣವಿತ್ತು ಎಂದರು.