ಪ್ರಧಾನಿ ಮೋದಿ ಕಲಿತ ಶಾಲೆಗೆ ವಿದ್ಯಾರ್ಥಿಗಳ ಪ್ರವಾಸಕ್ಕಾಗಿ ಪೋರ್ಟಲ್ ಆರಂಭಿಸಿದ ಶಿಕ್ಷಣ ಸಚಿವಾಲಯ
ಹೊಸದಿಲ್ಲಿ: ಕೇಂದ್ರ ಶಿಕ್ಷಣ ಸಚಿವಾಲಯವು ಪ್ರಧಾನಿ ನರೇಂದ್ರ ಮೋದಿಯವರು ವಿದ್ಯಾಭ್ಯಾಸ ಮಾಡಿದ್ದ ಗುಜರಾತಿನ ವಡನಗರದಲ್ಲಿರುವ ಶಾಲೆಗೆ ದೇಶಾದ್ಯಂತದ ವಿದ್ಯಾರ್ಥಿಗಳಿಗಾಗಿ ಪ್ರವಾಸವನ್ನು ಆಯೋಜಿಸಿದೆ. ‘ಪ್ರೇರಣಾ ’ ಎಂದು ಹೆಸರಿಸಲಾಗಿರುವ ಪ್ರವಾಸ ಕಾರ್ಯಕ್ರಮದ ವಿವರಗಳಿರುವ ಪೋರ್ಟಲ್ ಗೆ ಸಚಿವಾಲಯವು ಗುರುವಾರ ಚಾಲನೆ ನೀಡಿದೆ.
9ರಿಂದ 12ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ‘ಪ್ರೇರಣಾ’ದಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುವುದು ಅಗತ್ಯವಾಗಿದ. ಬಳಿಕ ಅರ್ಜಿದಾರರು ಮೂರು ಹಂತಗಳ ಆಯ್ಕೆ ಪ್ರಕ್ರಿಯೆಗೆ ಒಳಪಡುತ್ತಾರೆ. ಶಾರ್ಟ್ ವೀಡಿಯೊದ ಚಿತ್ರೀಕರಣ,‘ನಾನು ಏಕೆ ಪ್ರೇರಣಾ ಕಾರ್ಯಕ್ರಮಕ್ಕೆ ಆಯ್ಕೆಯಾಗಬೇಕು’ ಅಥವಾ ‘2047ಕ್ಕೆ ಭಾರತದ ಕುರಿತು ನನ್ನ ಮುನ್ನೋಟ’ ದಂತಹ ವಿಷಯಗಳ ಮೇಲೆ ಪ್ರಬಂಧಗಳು/ಕವಿತೆಗಳು/ಲೇಖನಗಳು ಮತ್ತು ಸೃಜನಾತ್ಮಕ ಅಭಿವ್ಯಕ್ತಿಯ ಇತರ ರೂಪಗಳಂತಹ ಚಟುವಟಿಕೆಗಳನ್ನು ಈ ಪ್ರಕ್ರಿಯೆಯು ಒಳಗೊಂಡಿರುತ್ತದೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರತಿ ಜಿಲ್ಲೆಗಳಿಂದ ಆಯ್ದ ತಲಾ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ 20 ಮಕ್ಕಳ ತಂಡಗಳನ್ನು ರಚಿಸಲಾಗುವುದು. ಪ್ರತಿ ತಂಡದಲ್ಲಿ 10 ಬಾಲಕರು ಮತ್ತು 10 ಬಾಲಕಿಯರು ಇರಲಿದ್ದಾರೆ. ಸಚಿವಾಲಯವು ತಿಳಿಸಿರುವಂತೆ ಈ ಕಾರ್ಯಕ್ರಮವು ಒಂದು ವರ್ಷ ಕಾಲ ಮುಂದುವರಿಯಲಿದೆ.
ಸರಕಾರವು ‘ಬದಲಾವಣೆಯ ವೇಗವರ್ಧಕ ’ಗಳಾಗಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ‘ಪ್ರೇರಣಾ’ವನ್ನು ಆರಂಭಿಸುವ ತನ್ನ ಯೋಜನೆಯನ್ನು ಜೂನ್ 2022ರಲ್ಲಿ ಪ್ರಕಟಿಸಿತ್ತು.
ಸಚಿವಾಲಯದ ಪ್ರಕಾರ ‘ಪ್ರೇರಣಾ:ಅನುಭವದ ಕಲಿಕೆಯ ಕಾರ್ಯಕ್ರಮ’ವು ಪಾಲ್ಗೊಳ್ಳುವ ಎಲ್ಲ ವಿದ್ಯಾರ್ಥಿಗಳಿಗೆ ಅರ್ಥಪೂರ್ಣ,ಅನನ್ಯ ಮತ್ತು ಸ್ಫೂರ್ತಿದಾಯಕ ಅನುಭವವನ್ನು ನೀಡುವ ಮತ್ತು ಅವರಲ್ಲಿ ನಾಯಕತ್ವ ಗುಣಗಳನ್ನು ಮೈಗೂಡಿಸುವ ಉದ್ದೇಶವನ್ನು ಹೊಂದಿದೆ.
ಒಂದು ವಾರದ ಅಧ್ಯಯನ ಪ್ರವಾಸಕ್ಕೆ 1956ರಲ್ಲಿ ಮೋದಿಯವರು ಒಂದನೇ ತರಗತಿಗೆ ದಾಖಲಾಗಿದ್ದ,1888ರಲ್ಲಿ ಸ್ಥಾಪನೆಗೊಂಡ ಪ್ರಾಥಮಿಕ ಶಾಲೆಯು ಆತಿಥೇಯನಾಗಿರಲಿದೆ. 2018ರವರೆಗೂ ಕಾರ್ಯ ನಿರ್ವಹಿಸುತ್ತಿದ್ದ ವಡನಗರ ಕುಮಾರ ಶಾಲಾ ನಂ.-1 ಅನ್ನು ಭಾರತೀಯ ಪುರಾತತ್ವ ಸರ್ವೆ ಇಲಾಖೆಯು ವಡನಗರ ಅಭಿವೃದ್ಧಿಯ ಅಂಗವಾಗಿ ಮರುಸ್ಥಾಪಿಸಿದೆ. ಈ ಶಾಲೆಯನ್ನು ಈಗ ‘ಪ್ರೇರಣಾ ಶಾಲೆ’ ಎಂದು ಕರೆಯಲಾಗುವುದು.
ಕೇವಲ ಎಂಟು ತರಗತಿ ಕೋಣೆಗಳನ್ನು ಹೊಂದಿರುವ ಶಾಲೆಯನ್ನು ದೇಶಿಯ ಅಂಶಗಳನ್ನು ಬಳಸಿಕೊಂಡು ಮೂಲ ಸ್ವರೂಪವನ್ನು ನೆನಪಿಸುವಂತೆ ನವೀಕರಿಸಲಾಗಿದೆ. ಶಾಲೆಯು ಕೆಫೆ, ಓರಿಯಂಟೇಶನ್ ಸೆಂಟರ್, ಸ್ಮರಣಿಕೆಗಳ ಮಳಿಗೆ ಮತ್ತು ಸಮುದಾಯ ಹಸಿರು ಪ್ರದೇಶವನ್ನು ಹೊಂದಿರಲಿದೆ.
ಶಾಲೆಯ ಪಠ್ಯಕ್ರಮವನ್ನು ಐಐಟಿ-ಗಾಂಧಿನಗರ ರೂಪಿಸಿದ್ದು, ಅದು ಸ್ವಾಭಿಮಾನ ಮತ್ತು ವಿನಯ, ಶೌರ್ಯ ಮತ್ತು ಸಾಹಸ, ಕರುಣೆ ಮತ್ತು ಸೇವೆ, ಪರಿಶ್ರಮ ಮತ್ತು ಸಮರ್ಪಣೆ, ವಿವಿಧತೆ ಮತ್ತು ಏಕತೆ, ಸತ್ಯನಿಷ್ಠೆ ಮತ್ತು ಪರಿಶುದ್ಧತೆ, ವಿನೂತನತೆ ಮತ್ತು ಜಿಜ್ಞಾಸೆ, ಶ್ರದ್ಧೆ ಮತ್ತು ವಿಶ್ವಾಸ, ಸ್ವಾತಂತ್ರ್ಯ ಮತ್ತು ಕರ್ತವ್ಯ ಇವುಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದೆ.
ಕೇಂದ್ರ ಸಂಸ್ಕೃತಿ ಸಚಿವಾಲಯ ಮತ್ತು ಗುಜರಾತ ಸರಕಾರ ಶಾಲೆಯ ಅಭಿವೃದ್ಧಿಯ ಜೊತೆಗೆ 200 ಕೋಟಿ ರೂ.ಗಳ ವೆಚ್ಚದಲ್ಲಿ ಪುರಾತತ್ವ ಮ್ಯೂಝಿಯಂ ಅನ್ನೂ ಸ್ಥಾಪಿಸಲಿವೆ. 2,500 ವರ್ಷಗಳ ಅವಧಿಯಲ್ಲಿ ಏಳು ಸಾಂಸ್ಕೃತಿಕ ಯುಗಗಳ ಮೂಲಕ ಪಟ್ಟಣದ ಬೆಳವಣಿಗೆಯನ್ನು ಈ ಮ್ಯೂಝಿಯಂ ಪ್ರದರ್ಶಿಸಲಿದೆ.
ತಮ್ಮ ವಾಸ್ತವ್ಯದ ಅವಧಿಯಲ್ಲಿ ವಿದ್ಯಾರ್ಥಿಗಳು ಯೋಗ,ಏಕಾಗ್ರತೆ ಮತ್ತು ಧ್ಯಾನ ಅಧಿವೇಶನಗಳಲ್ಲಿ ಭಾಗವಹಿಸಲಿದ್ದಾರೆ. ಪ್ರಾಚೀನ ಮತ್ತು ಪರಂಪರೆ ತಾಣಗಳಿಗೆ ಭೇಟಿ, ಸ್ಫೂರ್ತಿದಾಯಕ ಚಲನಚಿತ್ರಗಳ ಪ್ರದರ್ಶನ, ಪ್ರತಿಭಾ ಪ್ರದರ್ಶನ ಇತ್ಯಾದಿಗಳು ಸಂಜೆಯ ಚಟುವಟಿಕೆಗಳಲ್ಲಿ ಸೇರಿವೆ.