ಕೇರಳ | ವರ್ಷಗಳ ಕಾಲ ಅಪ್ರಾಪ್ತ ಬಾಲಕಿಗೆ ಮಾದಕ ದ್ರವ್ಯ ಉಣಿಸಿ ಲೈಂಗಿಕ ದೌರ್ಜನ್ಯ: ಓರ್ವನ ಬಂಧನ

ಸಾಂದರ್ಭಿಕ ಚಿತ್ರ | PC : freepik.com
ತಿರುವನಂತಪುರಂ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಆಕೆಯ ಆಹಾರದಲ್ಲಿ ಕೃತಕ ಮಾದಕ ದ್ರವ್ಯ ಬೆರೆಸಿ, ಕಳೆದ ಕೆಲವು ವರ್ಷಗಳಿಂದ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 23 ವರ್ಷದ ಯುವಕನೊಬ್ಬನನ್ನು ಕೇರಳದ ಮಲಪ್ಪುರಂ ಜಿಲ್ಲೆಯಿಂದ ಬಂಧಿಸಲಾಗಿದೆ.
ಆರೋಪಿಯನ್ನು ಮಲ್ಲಪ್ಪುರಂ ಜಿಲ್ಲೆಯ ವೆಂಗಾರ ಗ್ರಾಮದ ನಿವಾಸಿ ಅಬ್ದುಲ್ ಗಫೂರ್ ಎಂದು ಗುರುತಿಸಲಾಗಿದ್ದು, ಆತನನ್ನು ಸೋಮವಾರ ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪೊಲೀಸರ ಪ್ರಕಾರ, 2020ರಲ್ಲಿ ಆರೋಪಿಯು ಸಾಮಾಜಿಕ ಮಾಧ್ಯಮದ ಮೂಲಕ 16 ವರ್ಷ ವಯಸ್ಸಿನ ಬಾಲಕಿಯೊಬ್ಬಳೊಂದಿಗೆ ಗೆಳೆತನ ಬೆಳೆಸಿಕೊಂಡಿದ್ದ. ನಂತರ, ಆಕೆಗೆ ಅರಿವಾಗದಂತೆ, ಆಕೆಯ ಆಹಾರದಲ್ಲಿ ಕೃತಕ ಮಾದಕ ದ್ರವ್ಯಗಳನ್ನು ಬೆರೆಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಆ ಘಟನೆಯ ಚಿತ್ರಗಳನ್ನೂ ಸೆರೆ ಹಿಡಿದಿದ್ದ ಆತ, ಅವುಗಳನ್ನು ಬಹಿರಂಗಗೊಳಿಸುವುದಾಗಿ ಆಕೆಗೆ ಬೆದರಿಕೆ ಒಡ್ಡಿದ್ದ ಎಂದು ಹೇಳಲಾಗಿದೆ. ಅಲ್ಲದೆ, ಆಕೆಯ ಚಿನ್ನದ ಆಭರಣಗಳನ್ನೂ ಆತ ಕಸಿದುಕೊಂಡಿದ್ದ ಎಂದು ಆರೋಪಿಸಲಾಗಿದೆ.
ನಂತರ, ತಮ್ಮ ಪುತ್ರಿಯು ಕೃತಕ ಮಾದಕ ದ್ರವ್ಯಗಳ ವ್ಯಸನಕ್ಕೊಳಗಾಗಿರುವುದು ಆಕೆಯ ಪೋಷಕರ ಅರಿವಿಗೆ ಬಂದಿದ್ದು, ಆಕೆಯನ್ನು ವ್ಯಸನ ಮುಕ್ತಗೊಳಿಸುವ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಇದರ ಬೆನ್ನಿಗೇ, ತಾನು ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವುದನ್ನು ಆಕೆ ಬಹಿರಂಗಗೊಳಿಸಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಸೆರೆ ಹಿಡಿದು, ಸಂತ್ರಸ್ತ ಯುವತಿಯ ಚಿತ್ರಗಳನ್ನು ಸೆರೆ ಹಿಡಿಯಲು ಬಳಸಿದ್ದ ಮೊಬೈಲ್ ಫೋನ್ ಅನ್ನು ಆತನಿಂದ ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಬಂಧಿತ ಯುವಕನು ಕೃತಕ ಮಾದಕ ದ್ರವ್ಯ ಮಾರಾಟ ಪ್ರಕರಣವೊಂದರಲ್ಲೂ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೇರೆ ಯುವತಿಯರೇನಾದರೂ ಇದೇ ರೀತಿ ಆತನ ಬಲೆಗೆ ಬಿದ್ದಿದ್ದಾರೆಯೆ ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.