ಸೇನೆಯ ಆಧುನೀಕರಣಕ್ಕಾಗಿನ ದೇಣಿಗೆಗೆ ಸಂಬಂಧಿಸಿದಂತೆ ವಾಟ್ಸ್ ಆ್ಯಪ್ ನಲ್ಲಿ ದಾರಿ ತಪ್ಪಿಸುವ ಸಂದೇಶ: ಕೇಂದ್ರ ಸರಕಾರ ಎಚ್ಚರಿಕೆ

Update: 2025-04-28 18:53 IST
ಸೇನೆಯ ಆಧುನೀಕರಣಕ್ಕಾಗಿನ ದೇಣಿಗೆಗೆ ಸಂಬಂಧಿಸಿದಂತೆ ವಾಟ್ಸ್ ಆ್ಯಪ್ ನಲ್ಲಿ ದಾರಿ ತಪ್ಪಿಸುವ ಸಂದೇಶ: ಕೇಂದ್ರ ಸರಕಾರ ಎಚ್ಚರಿಕೆ

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಹೊಸದಿಲ್ಲಿ: ಭಾರತೀಯ ಸೇನೆಯ ಆಧುನೀಕರಣಕ್ಕಾಗಿ ದೇಣಿಗೆಯನ್ನು ಕೋರಿ ಕೇಂದ್ರ ಸರಕಾರವು ಬ್ಯಾಂಕ್ ಖಾತೆಯೊಂದನ್ನು ತೆರೆದಿದೆ ಎಂಬ ದಾರಿ ತಪ್ಪಿಸುವ ಸಂದೇಶವೊಂದು ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿದೆ ಎಂದು ರವಿವಾರ ರಕ್ಷಣಾ ಸಚಿವಾಲಯ ಎಚ್ಚರಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ರಕ್ಷಣಾ ಸಚಿವಾಲಯ, ಈ ಸಂದೇಶದ ನೈಜತೆಯನ್ನು ಅಲ್ಲಗಳೆದಿದ್ದು, ಇಂತಹ ವಂಚಕರ ಸಂದೇಶಗಳ ಕುರಿತು ಜನರು ಎಚ್ಚರಿಕೆಯಿಂದಿರಬೇಕು ಎಂದು ಮನವಿ ಮಾಡಿದೆ.

“ಭಾರತೀಯ ಸೇನೆಯ ಆಧುನೀಕರಣ ಹಾಗೂ ಕಾರ್ಯಾಚರಣೆಯಲ್ಲಿ ಗಾಯಗೊಂಡ ಅಥವಾ ಮೃತಪಟ್ಟ ಯೋಧರಿಗಾಗಿ ದೇಣಿಗೆ ನೀಡಲು ನಿರ್ದಿಷ್ಟ ಬ್ಯಾಂಕ್ ಖಾತೆಯೊಂದನ್ನು ತೆರೆಯಲಾಗಿದೆ ಎಂಬ ದಾರಿ ತಪ್ಪಿಸುವ ಸಂದೇಶವೊಂದು ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿದೆ” ಎಂದು ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.

ವಾಟ್ಸ್ ಆ್ಯಪ್ ನಲ್ಲಿ ತಪ್ಪಾಗಿ ಹಂಚಿಕೆಯಾಗುತ್ತಿರುವ ಈ ಸಂದೇಶದಲ್ಲಿ, ಇದರ ಜಾರಿಗಾಗಿ ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ ಹಾಗೂ ಈ ಪ್ರಸ್ತಾವನೆಯ ಮುಖ್ಯ ರಾಯಭಾರಿಯನ್ನಾಗಿ ನಟ ಅಕ್ಷಯ್ ಕುಮಾರ್ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಲಾಗಿದೆ ಎಂದು ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ.

“ಈ ಸಂದೇಶದಲ್ಲಿ ನೀಡಲಾಗಿರುವ ಬ್ಯಾಂಕ್ ಖಾತೆ ವಿವರಗಳು ತಪ್ಪಾಗಿದ್ದು, ಇದರಿಂದಾಗಿ ಆನ್ ಲೈನ್ ದೇಣಿಗೆಗಳು ತಿರಸ್ಕೃತಗೊಳ್ಳುತ್ತಿವೆ” ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.

“ಸಕ್ರಿಯ ಯುದ್ಧ ಕಾರ್ಯಾಚರಣೆಯಲ್ಲಿ ಮೃತಪಟ್ಟ ಅಥವಾ ಅಂಗವೈಕಲ್ಯಕ್ಕೆ ತುತ್ತಾದ ಯೋಧರಿಗಾಗಿ ಕೇಂದ್ರ ಸರಕಾರ ವಿವಿಧ ಕಲ್ಯಾಣ ಯೋಜನೆಗಳಿಗೆ ಚಾಲನೆ ನೀಡಿದೆ” ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

“ಸಕ್ರಿಯ ಕಾರ್ಯಾಚರಣೆಯಲ್ಲಿ ತಮ್ಮ ಜೀವ ತ್ಯಾಗ ಮಾಡಿದ ಅಥವಾ ಗಂಭೀರವಾಗಿ ಗಾಯಗೊಂಡ ಯೋಧರು/ ನೌಕಾಪಡೆ ಸಿಬ್ಬಂದಿಗಳು/ವಾಯುಪಡೆ ಸಿಬ್ಬಂದಿಗಳ ಕುಟುಂಬಗಳಿಗೆ ತಕ್ಷಣವೇ ಹಣಕಾಸು ನೆರವು ಒದಗಿಸಲು ಕೇಂದ್ರ ಸರಕಾರ 2020ರಲ್ಲಿ ʼಸಶಸ್ತ್ರ ಪಡೆಗಳ ಯುದ್ಧಾಪಘಾತ ಕಲ್ಯಾಣ ನಿಧಿ’ಯನ್ನು ಸ್ಥಾಪಿಸಿದೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

“ಭಾರತೀಯ ಸೇನೆಯ ಮಾಜಿ ಯೋಧರ ಕಲ್ಯಾಣ ಇಲಾಖೆಯ ಪರವಾಗಿ ರಕ್ಷಣಾ ಸಚಿವಾಲಯ ಈ ನಿಧಿಗಾಗಿನ ಖಾತೆಗಳನ್ನು ನಿರ್ವಹಿಸುತ್ತಿದೆ. ದೇಣಿಗೆ ನೀಡಲು ಬಯಸುವವರು ‘ಸಶಸ್ತ್ರ ಪಡೆಗಳ ಯುದ್ಧಾಪಘಾತ ಕಲ್ಯಾಣ ನಿಧಿ’ಗೆ ನೇರವಾಗಿ ಕೊಡುಗೆಯನ್ನು ನೀಡಬಹುದಾಗಿದೆ” ಎಂದೂ ಈ ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

ಈ ಸಂದೇಶವನ್ನು ಪರಿಶೀಲಿಸಿರುವ ಪ್ರೆಸ್ ಇನ್ಫರ್ಮೇಶನ್ ಬ್ಯೂರೊ ಕೂಡಾ, ಇದು ದಾರಿ ತಪ್ಪಿಸುವ ಸಂದೇಶ ಎಂದು ಜನರಿಗೆ ಎಚ್ಚರಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News