ಕೇಂದ್ರದ ಯೋಜನೆಗಳಿಗೆ ತಮಿಳುನಾಡು ಸರ್ಕಾರ ಅಡ್ಡಿಪಡಿಸುತ್ತಿದೆ ಎಂದ ಪ್ರಧಾನಿ ಮೋದಿ: ಪಟ್ಟಿ ಕೇಳಿದ ಸಿಎಂ ಸ್ಟಾಲಿನ್
ಚೆನ್ನೈ: ರಾಜ್ಯದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳಿಗೆ ತಮ್ಮ ಸರ್ಕಾರ ಅಡ್ಡಿಪಡಿಸುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಆರೋಪಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರತಿಕ್ರಿಯಿಸಿದ್ದು, ಉದಾಹರಣೆಗಳನ್ನು ಪಟ್ಟಿ ಮಾಡುವಂತೆ ಆಗ್ರಹಿಸಿದ್ದಾರೆ.
"(ಮದುರೈನಲ್ಲಿ) ಏಮ್ಸ್ ಆಸ್ಪತ್ರೆ ತೆರೆಯದಂತೆ ನಾವು ಅವರನ್ನು ತಡೆಯುತ್ತಿದ್ದೇವೆಯೇ?" ಎಂದು ಸ್ಟಾಲಿನ್ ಅವರು ತಮ್ಮ ಹುಟ್ಟುಹಬ್ಬದ (ಮಾರ್ಚ್ 1) ಮುನ್ನಾದಿನದಂದು ತಮ್ಮ ಕಾರ್ಯಕರ್ತರು ಮತ್ತು ಡಿಎಂಕೆಯ ನಾಯಕರಿಗೆ ಬರೆದ ಪತ್ರದಲ್ಲಿ ಪ್ರಶ್ನಿಸಿದ್ದಾರೆ.
ತಮ್ಮ ಪಕ್ಷವು ಬಡವರ ವೈದ್ಯಕೀಯ ಶಿಕ್ಷಣದ ಕನಸುಗಳನ್ನು ಪುಡಿಮಾಡುತ್ತಿರುವ ನೀಟ್ ಪರೀಕ್ಷೆಯನ್ನು ವಿರೋಧಿಸಿದೆ, ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ವಿರೋಧಿಸಿದೆ, ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿದೆ , ಅಲ್ಪಸಂಖ್ಯಾತರು ಮತ್ತು ಶ್ರೀಲಂಕಾ ತಮಿಳರ ವಿರುದ್ಧವಾಗಿ ಬರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿದೆ ಎಂದು ಸ್ಟಾಲಿನ್ ಹೇಳಿದರು.
ಡಿಎಂಕೆಯನ್ನು ಹತ್ತಿಕ್ಕಲು ಮತ್ತು ನಾಶಮಾಡಲು ಪ್ರಧಾನಿಯವರು ತಮ್ಮ ಭಾಷಣದಲ್ಲಿ ಮಾಡುತ್ತಿರುವ ಪ್ರಯತ್ನವನ್ನು ಉಲ್ಲೇಖಿಸಿದ ಸ್ಟಾಲಿನ್, ಹೀಗೆ ಮಾಡಲು ಪ್ರಯತ್ನಿಸಿದವರಿಗೆ ಏನಾಗಿದೆ ಎಂಬುದನ್ನು ತಮಿಳುನಾಡಿನ ಇತಿಹಾಸವು ಬಹಿರಂಗಪಡಿಸುತ್ತದೆ ಎಂದಿದ್ದಾರೆ.
ಆಡಳಿತ ಪಕ್ಷವಾಗಿ ವಿಫಲವಾಗಿರುವ ಬಿಜೆಪಿಯು 2024 ರ ಚುನಾವಣೆಯ ನಂತರ ಉತ್ತಮ ವಿರೋಧ ಪಕ್ಷವಾಗಬಹುದು ಎಂದು ಸ್ಟಾಲಿನ್ ವ್ಯಂಗ್ಯವಾಡಿದರು.
ಪ್ರಧಾನಿ ಮೋದಿ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿದ್ದರೂ ಬಿಜೆಪಿ ಗೆಲ್ಲುವುದಿಲ್ಲ ಎಂದು ತಿಳಿದಿತ್ತು ಎಂದ ಅವರು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಮೂಲಕ ಕೇಂದ್ರ ಸರ್ಕಾರದಲ್ಲಿ ಬದಲಾವಣೆ ತರಲು ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.