ಅಸ್ಸಾಂ | ‘ಲವ್ ಜಿಹಾದ್’ಆರೋಪದಲ್ಲಿ ಬಾಲಕನ ಮೇಲೆ ಗುಂಪು ಹಲ್ಲೆ
ಗುವಾಹಟಿ: ಬಾಲಕನೋರ್ವ ಗೆಳತಿಯೊಂದಿಗೆ ಮಾತನಾಡಿದ್ದಕ್ಕೆ ‘ಲವ್ ಜಿಹಾದ್’ ಆರೋಪ ಹೊರಿಸಿ ಯುವಕರ ಗುಂಪೊಂದು ಆತನಿಗೆ ಹಲ್ಲೆಗೈದ ಘಟನೆ ಕಾಚಾರ್ ಜಿಲ್ಲೆಯಲ್ಲಿ ನಡೆದಿದ್ದು, ಪೋಲಿಸರು ಶುಕ್ರವಾರ ಬಾಲಕನನ್ನು ಪೊಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.
ಸ್ವಾತಂತ್ರ್ಯ ದಿನದಂದು ಬೆಳಿಗ್ಗೆ ಜಿಲ್ಲೆಯ ಸೋನಾಯಿ ಪೋಲಿಸ್ ಠಾಣಾ ವ್ಯಾಪ್ತಿಯ ನರಸಿಂಗಪುರದ ಮಾಧ್ಯಮಿಕ ಶಾಲೆಯ ಬಳಿ ಈ ಘಟನೆ ನಡೆದಿದೆ.
ಬಾಲಕ ಬಾಲಕಿಯೊಂದಿಗೆ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದಿದ್ದ ಯುವಕರ ಗುಂಪು ಆತನ ಹೆಸರನ್ನು ಕೇಳಿತ್ತು.
‘ನಾನು ನನ್ನ ಹೆಸರು ಅಲಿ ಅಹ್ಮದ್ ಎಂದು ಹೇಳಿದಾಗ 15-20 ಜನರಿದ್ದ ಗುಂಪು ನನ್ನನ್ನು ಥಳಿಸಲು ಆರಂಭಿಸಿತ್ತು. ಅವರು ಯಾರೆಂದು ನನಗೆ ಗೊತ್ತಿಲ್ಲ’ ಎಂದು 12ನೇ ತರಗತಿಯ ವಿದ್ಯಾರ್ಥಿಯಾಗಿರುವ ಬಾಲಕ ಸುದ್ದಿಗಾರರಿಗೆ ತಿಳಿಸಿದ.
ಇಬ್ಬರೂ ಸಹಪಾಠಿಗಳಾಗಿದ್ದರು ಮತ್ತು 10ನೇ ತರಗತಿಯವರೆಗೆ ಜೊತೆಯಲ್ಲೇ ಓದಿದ್ದರು ಎಂದು ಪೋಲಿಸರು ಹೇಳಿದರು.
ಬಾಲಕನನ್ನು ಅರೆಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿದ್ದನ್ನು ವೈರಲ್ ಆಗಿರುವ ವೀಡಿಯೊ ತೋರಿಸಿದ್ದರೆ, ಹಗ್ಗದಿಂದ ಆತನ ಕೈಗಳನ್ನು ಕಟ್ಟಿ ಜನರೆದುರು ಪರೇಡ್ ಮಾಡಿಸಿದ್ದನ್ನು ಇನ್ನೊಂದು ವೀಡಿಯೊ ತೋರಿಸಿದೆ. ಬಾಲಕನ ಮೂಗು ಮತ್ತು ಬಾಯಿಯಿಂದ ರಕ್ತಸ್ರಾವವಾಗುತ್ತಿದ್ದನ್ನು ಮತ್ತು ಬಾಲಕಿ ಅಳುತ್ತಿರುವ ದೃಶ್ಯಗಳೂ ವೀಡಿಯೊಗಳಲ್ಲಿವೆ.
‘ನಮ್ಮ ನಡುವೆ ಯಾವುದೇ ಪ್ರೇಮ ವ್ಯವಹಾರವಿಲ್ಲ’ ಎಂದು ಹೇಳುತ್ತಿದ್ದ ಅಹ್ಮದ್ ನೆರವಿಗಾಗಿ ಯಾಚಿಸುತ್ತಿದ್ದರೂ ಯಾರೂ ಮುಂದಾಗಿರಲಿಲ್ಲ. ಗುಂಪು ಬಾಲಕಿಯನ್ನೂ ಥಳಿಸಿತ್ತು.
ಅಲಿಯ ಕುಟುಂಬವು ದೂರು ಸಲ್ಲಿಸಿದೆಯಾದರೂ ಹಲ್ಲೆಗೆ ಸಂಬಂಧಿಸಿದಂತೆ ಯಾರನ್ನೂ ಈವರೆಗೆ ಬಂಧಿಸಲಾಗಿಲ್ಲ. ಆದರೆ ಬಾಲಕಿಯ ಕುಟುಂಬದ ದೂರಿನ ಮೇರೆಗೆ ಅಹ್ಮದ್‌ನನ್ನು ಬಂಧಿಸಲಾಗಿದೆ.
ಬಾಲಕಿಯ ಹೇಳಿಕೆಯ ಆಧಾರದಲ್ಲಿ ಅಹ್ಮದ್ ನನ್ನು ಪೊಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಕಾಚಾರ್ ಜಿಲ್ಲಾ ಎಸ್‌ಪಿ ತಿಳಿಸಿದರು.
ಮುಸ್ಲಿಮೇತರ ಹೆಸರಿನಲ್ಲಿ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ ಆತ ವಾಟ್ಸ್ಯಾಪ್‌ನಲ್ಲಿ ಆಕೆಗೆ ‘ಅಶ್ಲೀಲ’ ವೀಡಿಯೊ ಕಳುಹಿಸಿದ್ದ ಎಂದು ಇನ್ನೋರ್ವ ಪೋಲಿಸ್ ಅಧಿಕಾರಿ ಹೇಳಿದರು.