ಯದುವೀರ್ ಹೆಸರನ್ನು ʼಯಮರಾಜ್‌ ಒಡಿಯರ್‌ʼ ಎಂದ ಮೋದಿ: ಪ್ರಧಾನಿ ಪ್ರಮಾದಕ್ಕೆ ಕಾಲೆಳೆದ ಜನರು

Update: 2024-04-15 09:10 GMT

ನರೇಂದ್ರ ಮೋದಿ 

ಮೈಸೂರು: ರವಿವಾರ (ಎ.14) ಮೈಸೂರು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಹೆಸರನ್ನು ʼಯಮರಾಜ್‌ ಒಡಿಯರ್‌ʼ ಎಂದು ಉಚ್ಛರಿಸಿ ಮುಜುಗರಕ್ಕೀಡಾಗಿದ್ದಾರೆ.

2024 ರ ಲೋಕಸಭೆ ಚುನಾವಣಾ ಪ್ರಯುಕ್ತ ಎನ್‌ ಡಿಎ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವ ವೇಳೆ ಈ ಪ್ರಮಾದ ನಡೆದಿದೆ.

ಪ್ರಧಾನಿ ಅವರು ತಮ್ಮ ಭಾಷಣದ ಕೊನೆಯಲ್ಲಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು, ಮೈಸೂರಿನ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್, ಮಂಡ್ಯದ ಅಭ್ಯರ್ಥಿ ಎಚ್‌ಡಿ ಕುಮಾರಸ್ವಾಮಿ, ಚಾಮರಾಜನಗರದ ಅಭ್ಯರ್ಥಿ ಬಾಲರಾಜ್ ಮತ್ತು ಹಾಸನದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸಬೇಕು ಎಂದು ಮತದಾರರಿಗೆ ಮನವಿ ಮಾಡಿದರು.

ಮತದಾರರಲ್ಲಿ ಮನವಿ ಮಾಡಿಕೊಳ್ಳುವ ವೇಳೆ ಮೈಸೂರು ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಹೆಸರನ್ನು ತಪ್ಪಾಗಿ ಉಚ್ಚರಿಸಿದ ಪ್ರಧಾನಿ ಮುಜುಗರಕ್ಕೀಡಾಗಿದ್ದಾರೆ.

“ಮೈಸೂರಿನ ಎನ್‌ಡಿಎ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಯಮರಾಜ ಒಡಿಯರ್‌” ಎಂದು ಹೇಳಿದ ಪ್ರಧಾನಿ ಮೋದಿ ತಕ್ಷಣ ಸಾವರಿಸಿಕೊಂಡು "ಚಾಮರಾಜ ಒಡೆಯರ್" ಎಂದು ಪುನರುಚ್ಚರಿಸಿದ್ದಾರೆ.

ಈ ವಿಡಿಯೋ ತುಣುಕನ್ನು ವೈರಲ್‌ ಮಾಡಿರುವ ನೆಟ್ಟಿಗರು ಪ್ರಧಾನಿ ಮೋದಿ ಅವರ ಬದಲು ಬೇರೆ ಯಾರಾದರೂ ರಾಜವಂಶದ ಹೆಸರನ್ನು ತಪ್ಪಾಗಿ ಉಚ್ಚರಿಸಿದ್ದರೆ ಮಾಧ್ಯಮಗಳು ಅದನ್ನೇ ದೊಡ್ಡ ಸುದ್ದಿಯಾಗಿ ಮಾಡುತ್ತಿತ್ತು ಎಂದು ಕಾಲೆಳೆದಿದ್ದಾರೆ.

“ನರೇಂದ್ರ ಮೋದಿಯ ಬದಲು ಇತರ ರಾಜಕಾರಣಿಗಳು 'ಚಾಮರಾಜ ಒಡೆಯರ್' ಅವರನ್ನು 'ಯಮರಾಜ್ ಒಡೆಯರ್' ಎಂದು ಉಲ್ಲೇಖಿಸಿದ್ದರೆ ವ್ಯಕ್ತವಾಗುತ್ತಿದ್ದ ಆಕ್ರೋಶವನ್ನು ಊಹಿಸಿ. ರಾಷ್ಟ್ರೀಯ ಮಾಧ್ಯಮಗಳು ಇದೇ ವಿಡಿಯೋ ಕ್ಲಿಪ್ ಅನ್ನು 24/7 ಪ್ರಸಾರ ಮಾಡುತ್ತಿದ್ದವು” ಎಂದು ಫ್ಯಾಕ್ಟ್‌ ಚೆಕರ್‌ ಮಹಮ್ಮದ್‌ ಝುಬೈರ್‌ ಟ್ವೀಟ್‌ ಮಾಡಿದ್ದಾರೆ.

ಅದಾಗ್ಯೂ, ನರೇಂದ್ರ ಮೋದಿ ಬೆಂಬಲಿಗರು ಮೋದಿ ಪರವಾಗಿ ಪ್ರತಿಕ್ರಿಯಿಸಿದ್ದು, ಯಮರಾಜ ಹಿಂದೂಗಳ ದೇವರು, ಯಮರಾಜನ ಹೆಸರು ತಪ್ಪಿ ಹೇಳಿದ್ದರಲ್ಲಿ ಅವಮಾನ ಆಗುವಂತದ್ದು ಏನೂ ಇಲ್ಲ. ಅಲ್ಲದೆ, ಪ್ರಧಾನಿ ಅವರು ಎರಡೇ ಸೆಕೆಂಡಿನಲ್ಲಿ ತಮ್ಮ ತಪ್ಪನ್ನು ತಿದ್ದಿಕೊಂಡಿದ್ದಾರೆ ಎಂದು ಬರೆದಿದ್ದಾರೆ.

ಈ ಹಿಂದೆ, ಸರ್‌ ಎಂ ವಿಶ್ವೇಶವರಯ್ಯ ಅವರ ಹೆಸರನ್ನು ರಾಹುಲ್‌ ಗಾಂಧಿ ತಪ್ಪಾಗಿ ಉಚ್ಛರಿಸಿದ್ದಕ್ಕೆ, ಪ್ರಧಾನಿ ಮೋದಿ ಮಾಡಿರುವ ಟೀಕೆಯನ್ನೂ ಝುಬೈರ್‌ ಅವರು ಉಲ್ಲೇಖಿಸಿದ್ದಾರೆ. ಪ್ರಧಾನಿ ಮೋದಿ ಅವರು ವಿಶ್ವೇಶ್ವರಯ್ಯ ಅವರ ಹೆಸರನ್ನು ಐದು ಸಲ ಉಚ್ಛರಿಸುವಂತೆ ರಾಹುಲ್‌ ಗಾಂಧಿಗೆ ಸವಾಲು ಹಾಕಿದ್ದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News