"ಮೋದಿ ಸರ್ಕಾರವೋ? ಭಾರತ ಸರ್ಕಾರವೋ?": ವಿಕಸಿತ ಭಾರತ ಸಂಕಲ್ಪ ಯಾತ್ರೆ ರಥಕ್ಕೆ ನಾಗರಿಕರಿಂದ ತಡೆ
ಹೊಸದಿಲ್ಲಿ: ಕೇಂದ್ರ ಸರಕಾರದ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ವಿಘ್ನಗಳು ಎದುರಾಗುತ್ತಿವೆ. ಯಾತ್ರೆಯುದ್ದಕ್ಕೂ ಮತದಾರರು ರಥವನ್ನು ನಿಲ್ಲಿಸಿ ಅದರೊಂದಿಗಿರುವ ಸರಕಾರಿ ನೌಕರರನ್ನು, ದೇಶದಲ್ಲಿರುವುದು ಮೋದಿ ಸರಕಾರವೋ ಭಾರತ ಸರಕಾರವೋ ಎಂದು ಪ್ರಶ್ನಿಸುತ್ತಿದ್ದಾರೆ ಎಂದು indianexpress.com ವರದಿ ಮಾಡಿದೆ.
ಡಿ.13ರಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಧಾನಗರಿ ತಾಲೂಕಿನ ಸೋನ್ಯಾಚಿ ಶಿರೋಳಿ ಗ್ರಾಮದಲ್ಲಿ ಅಂಬೇಡ್ಕರ್ ವಾದಿ ಕಾರ್ಯಕರ್ತ ರಾಜವೈಭವ ಶೋಭಾ ರಾಮಚಂದ್ರ (30) ಅವರು ಯಾತ್ರಾ ರಥದ ಜೊತೆಯಲ್ಲಿದ್ದ ಮಹಾರಾಷ್ಟ್ರ ಸರಕಾರದ ನೌಕರರನ್ನು ಪ್ರಶ್ನಿಸಿದ ವೀಡಿಯೊ ವೈರಲ್ ಆಗಿದೆ. ಶಾಂತಿಯುತ ಪ್ರತಿಭಟನೆ ನಡೆಸಿದ್ದ ಅವರು, ರಥದ ಮೇಲೆ ‘ಮೋದಿ ಸರಕಾರ’ ಎಂದು ಬರೆದಿದ್ದನ್ನು ಆಕ್ಷೇಪಿಸಿ ಅದು ‘ಭಾರತ ಸರಕಾರ’ ಅಥವಾ ‘ಗವರ್ನಮೆಂಟ್ ಆಫ್ ಇಂಡಿಯಾ’ ಆಗಬೇಕು ಎಂದು ಒತ್ತಾಯಿಸಿದ್ದರು.
ಅಂದಿನಿಂದ ಈ ವೈರಲ್ ವೀಡಿಯೊ ರಾಜ್ಯದ ವಿವಿಧ ಭಾಗಗಳ ಗ್ರಾಮಸ್ಥರಿಗೆ ಸ್ಫೂರ್ತಿಯಾಗಿದೆ. ಅವರು ರಥವು ತಮ್ಮ ಗ್ರಾಮವನ್ನು ಪ್ರವೇಶಿಸುವುದನ್ನು ತಡೆಯುತ್ತಿದ್ದಾರೆ ಅಥವಾ ಸರಕಾರಿ ಅಧಿಕಾರಿಗಳಿಗೆ ಸರಣಿ ಪ್ರಶ್ನೆಗಳನ್ನು ಕೇಳುವ ಮೂಲಕ ಕಾರ್ಯಕ್ರಮವನ್ನು ಕೆಲವೇ ನಿಮಿಷಗಳಲ್ಲಿ ಅಂತ್ಯಗೊಳಿಸುವುದನ್ನು ಅನಿವಾರ್ಯವಾಗಿಸುತ್ತಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಬ್ಯಾನರ್ ಹೊಂದಿರದ ಗ್ರಾಮಸ್ಥರು ಪ್ರಶ್ನೆಗಳನ್ನು ಕೇಳುವುದು ಪ್ರಜೆಗಳ ಸಾಂವಿಧಾನಿಕ ಹಕ್ಕು ಎಂದು ಒತ್ತಿ ಹೇಳುವ ಮೂಲಕ ರಥದ ಜೊತೆಯಲ್ಲಿರುವ ಅಧಿಕಾರಿಗಳನ್ನು ಕಕ್ಕಾಬಿಕ್ಕಿಯಾಗಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನೆಗಳಿಗೆ ಹೆದರಿದ ಪರ್ಭನಿ ಜಿಲ್ಲೆಯ ಎಂಟಕ್ಕೂ ಅಧಿಕ ಪಂಚಾಯತ್ ಸಿಬ್ಬಂದಿಗಳು ಡಿ.28ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ರಥದ ಮೇಲೆ ‘ಮೋದಿ ಸರಕಾರ’ ಎಂದು ಬರೆದಿರುವ ಹಿಂದಿನ ಕಾರಣವನ್ನು ಕೇಳಿ ತಮಗೆ ಗ್ರಾಮಸ್ಥರಿಂದ ದೂರವಾಣಿ ಕರೆಗಳು ಬರುತ್ತಿವೆ ಮತ್ತು ಮೋದಿಗಾಗಿ ಪ್ರಚಾರ ಮಾಡುತ್ತಿದ್ದೀರಾ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿಸಿದ್ದರು. ಯಾತ್ರೆಯ ಸಂದರ್ಭದಲ್ಲಿ ರಕ್ಷಣೆಯನ್ನು ಒದಗಿಸುವಂತೆಯೂ ಅವರು ಜಿಲ್ಲಾಧಿಕಾರಿಗಳನ್ನು ಕೋರಿದ್ದರು.
‘ಇಂಡಿಯಾ, ಅಂದರೆ ಭಾರತ’ ಎಂದು ಸಂವಿಧಾನವು ಹೇಳುತ್ತದೆ. ಅದು ‘ಭಾರತ ಸರಕಾರ ’ಅಥವಾ ‘ಗವರ್ನ್‌ಮೆಂಟ್ ಆಫ್ ಇಂಡಿಯಾ’ಆಗಿರಬೇಕು. ಓರ್ವ ವ್ಯಕ್ತಿ ದೇಶದ ಹೆಸರನ್ನು ಬದಲಿಸಿದರೆ ಅದು ಸಾರ್ವಭೌಮತೆಯ ಸಾಂವಿಧಾನಿಕ ತತ್ವದ ಉಲ್ಲಂಘನೆಯಾಗುತ್ತದೆ. ಇದು ದೇಶದ್ರೋಹಕ್ಕೆ ಸಮನಾಗಿದೆ ಎಂದು ರಾಜವೈಭವ ಹೇಳಿದರು.
ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಯಾತ್ರೆಯ ಉದ್ದೇಶ ಎಂದು ಹೇಳಲಾಗುತ್ತಿದೆ. ಯೋಜನೆಗಳು ಭಾರತ ಸರಕಾರದ್ದಾಗಿದ್ದರೆ ರಥದ ಮೇಲೆ ಏಕೆ ’ಮೋದಿ ಸರಕಾರದ ಗ್ಯಾರಂಟಿ ’ಎಂದು ಬರೆಯಲಾಗಿದೆ ಎಂದು ಅವರು ಪ್ರಶ್ನಿಸಿದರು.
"ಸರಕಾರಿ ಯೋಜನೆಗಳಿಗೆ ನಾವು ವಿರುದ್ಧವಾಗಿಲ್ಲ. ಆದರೆ ಸಾರ್ವತ್ರಿಕ ಚುನಾವಣೆಗಳಿಗೆ ಮೊದಲು ಯಾತ್ರೆಯ ಹೆಸರಿನಲ್ಲಿ ಬಿಜೆಪಿಯಂತಹ ರಾಜಕೀಯ ಪಕ್ಷವು ತನ್ನ ಧ್ವಜದ ಬಣ್ಣದ ರಥವನ್ನು ಬಳಸಿಕೊಂಡು ಸರಕಾರಿ ಹಣದ ದುರುಪಯೋಗ ಮಾಡುತ್ತಿರುವಾಗ ನಾವು ಅದನ್ನು ಪ್ರತಿಭಟಿಸಲೇಬೇಕು" ಎಂದರು.
ಅಹ್ಮದ್‌ನಗರ, ನಾಸಿಕ್, ಸತಾರಾ, ಪರ್ಭನಿ, ಅಕೋಲಾ, ಹಿಂಗೋಲಿ, ನಾಂದೇಡ್, ರತ್ನಾಗಿರಿ ಮತ್ತು ಬುಲ್ಡಾನಾ ಜಿಲ್ಲೆಗಳಲ್ಲಿಯೂ ವಿಕಸಿತ ಭಾರತ ಸಂಕಲ್ಪ ಯಾತ್ರೆಯ ವಿರುದ್ಧ ಶಾಂತಿಯುತ ಪ್ರತಿಭಟನೆಗಳು ನಡೆದಿವೆ. ಜನರು ಸರಕಾರಿ ಯೋಜನೆಗಳ ಅನುಷ್ಠಾನ ಮತ್ತು ರಥದ ಮೇಲೆ ’ಮೋದಿ ಸರಕಾರ ’ಎಂದು ಬರೆದಿರುವ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.