"ಯಾವುದೇ ಮನವಿಯನ್ನು ಸ್ವೀಕರಿಸಿಲ್ಲ": ಅದಾನಿ ಅರೆಸ್ಟ್ ವಾರೆಂಟ್ ಬಗ್ಗೆ ಮೌನ ಮುರಿದ ಕೇಂದ್ರ ಸರಕಾರ

Update: 2024-11-29 12:57 GMT

Photo | PTI

ಹೊಸದಿಲ್ಲಿ: ಉದ್ಯಮಿ ಗೌತಮ್ ಅದಾನಿ ಮತ್ತು ಇತರರ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್ ಗಳು ಮಾಡಿರುವ ಲಂಚ ಮತ್ತು ವಂಚನೆ ಆರೋಪದ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸರಕಾರ, ಇದು ಖಾಸಗಿ ಸಂಸ್ಥೆಗಳು, ಕೆಲ ವ್ಯಕ್ತಿಗಳು ಮತ್ತು ಯುಎಸ್ ನ್ಯಾಯಾಂಗ ಇಲಾಖೆಯನ್ನು ಒಳಗೊಂಡ ಕಾನೂನು ವಿಷಯವಾಗಿದೆ. ಈ ಕುರಿತು ʼನಾವು ಯಾವುದೇ ಮನವಿಯನ್ನು ಸ್ವೀಕರಿಸಿಲ್ಲʼ ಎಂದು ಹೇಳಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಈ ಕುರಿತು ಮಾತನಾಡಿದ್ದು, ಈ ವಿಷಯದ ಬಗ್ಗೆ ಭಾರತ ಸರ್ಕಾರಕ್ಕೆ ಮುಂಚಿತವಾಗಿ ತಿಳಿಸಲಾಗಿಲ್ಲ. ಇದು ಖಾಸಗಿ ಸಂಸ್ಥೆಗಳು, ವ್ಯಕ್ತಿಗಳು ಮತ್ತು ಯುಎಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟಿಸ್ ಅನ್ನು ಒಳಗೊಂಡಿರುವ ಕಾನೂನು ವಿಷಯವಾಗಿದೆ. ಅಂತಹ ಸಂದರ್ಭಗಳಲ್ಲಿ ಸ್ಥಾಪಿತ ಕಾರ್ಯವಿಧಾನಗಳು ಮತ್ತು ಕಾನೂನು ಮಾರ್ಗಗಳಿವೆ, ಅದನ್ನು ಅನುಸರಿಸಲಾಗುವುದು ಎಂದು ನಾವು ನಂಬುತ್ತೇವೆ ಎಂದು ಹೇಳಿದ್ದಾರೆ.

ಅದಾನಿ ಪ್ರಕರಣದಲ್ಲಿ ಅಮೆರಿಕ ಸಮನ್ಸ್ ಅಥವಾ ವಾರಂಟ್ ಅನ್ನು ಜಾರಿಗೊಳಿಸಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಭಾರತವು ಅಂತಹ ಯಾವುದೇ ವಿನಂತಿಯನ್ನು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.

ವಿದೇಶಿ ಸರ್ಕಾರದ ಸಮನ್ಸ್ ಅಥವಾ ಬಂಧನ ವಾರಂಟ್ ಪರಸ್ಪರ ಕಾನೂನು ಸಹಾಯದ ಭಾಗವಾಗಿದೆ. ಅಂತಹ ವಿನಂತಿಗಳನ್ನು ಸಲ್ಲಿಸಿದರೆ ಪರಿಶೀಲಿಸಲಾಗುತ್ತದೆ ಎಂದು ಜೈಸ್ವಾಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News