ಅಮಾನತನ್ನು ತಪ್ಪಿಸಿಕೊಳ್ಳಲು ನಾವು ಬಿಧೂರಿ, ಬ್ರಿಜ್‌ ಭೂಷಣ್ ರೀತಿ ವರ್ತಿಸಬೇಕು ಎಂದು ಮೋದಿ ಸರ್ಕಾರ ಬಯಸುತ್ತಿದೆ: ಡೆರೆಕ್ ಒ’ಬ್ರಿಯಾನ್ ವ್ಯಂಗ್ಯ

Update: 2024-01-02 14:14 GMT

ಡೆರೆಕ್ ಒ’ಬ್ರಿಯಾನ್ | Photo: PTI 

ಹೊಸದಿಲ್ಲಿ: ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 100 ಮಂದಿ ಸಂಸತ್ ಸದಸ್ಯರು ಹಾಗೂ 46 ಮಂದಿ ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಸಂಸತ್ತಿನ ಭದ್ರತಾ ವೈಫಲ್ಯದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟಿಸಿದ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿತ್ತು.

ಈ ಕುರಿತು ʼxʼ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯಾನ್, ಲೋಕಸಭೆಯಲ್ಲಿ ಕೋಮುವಾದಿ ಬೈಗುಳವನ್ನು ಪ್ರಯೋಗಿಸಿದ್ದ ರಮೇಶ್ ಬಿಧೂರಿ ಹಾಗೂ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಅವರನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರವನ್ನು ವ್ಯಂಗ್ಯವಾಡಿದ್ದಾರೆ.

“ಲೋಕಸಭೆಯಲ್ಲಿ ಅತ್ಯಂತ ಸಂಭಾವಿತವಾಗಿ ವರ್ತಿಸಿದ ಲೋಕಸಭೆಯ ಸದಸ್ಯರು ರಮೇಶ್ ಬಿಧೂರಿ ಹಾಗೂ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಆಗಿದ್ದಾರೆ. ಲೋಕಸಭೆಯಿಂದ ಅಮಾನತಾಗುವುದನ್ನು ತಪ್ಪಿಸಿಕೊಳ್ಳಲು ಅವರಿಬ್ಬರಂತೆಯೇ ವಿರೋಧ ಪಕ್ಷಗಳ ಸದಸ್ಯರು ವರ್ತಿಸಬೇಕು ಎಂದು ಮೋದಿ ಸರ್ಕಾರ ಬಯಸುತ್ತಿರುವಂತಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಚಳಿಗಾಲದ ಅಧಿವೇಶನದಲ್ಲಿ ಅಮಾನತಾಗಿದ್ದ ವಿರೋಧ ಪಕ್ಷಗಳ ಬಹುತೇಕ ಸದಸ್ಯರ ಅಮಾನತು ಡಿಸೆಂಬರ್ 29ರಂದು ಮತ್ತೆ ಮುಂದುವರಿದ ಕಲಾಪದಲ್ಲಿ ರದ್ದುಗೊಂಡಿದ್ದರೂ, 11 ರಾಜ್ಯಸಭಾ ಸದಸ್ಯರು ಹಾಗೂ ಮೂವರು ಲೋಕಸಭಾ ಸದಸ್ಯರು ಇನ್ನೂ ಅಮಾನತಿನಲ್ಲಿಯೇ ಉಳಿದಿದ್ದಾರೆ. ಅವರ ಅಮಾನತು ಕುರಿತ ವರದಿಯು ಹಕ್ಕುಬಾಧ್ಯತಾ ಸಮಿತಿಯ ಮುಂದೆ ಉಳಿದಿರುವುದು ಅದಕ್ಕೆ ಕಾರಣ. ಈ ಅಮಾನತಿನ ಕಾರಣಕ್ಕೆ ಮುಂಬರುವ ಬಜೆಟ್ ಅಧಿವೇಶನದಲ್ಲಿ ವಿರೋಧ ಪಕ್ಷಗಳ ಸದಸ್ಯರು ಭಾಗವಹಿಸುವುದು ಅನುಮಾನಾಸ್ಪದವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News