ಮೋದಿ ಪ್ರಜಾಪ್ರಭುತ್ವವನ್ನು ನಾಶಗೊಳಿಸುತ್ತಿದ್ದಾರೆ, ಅವರಿಗೂ ಪುಟಿನ್ ಗೂ ಯಾವುದೇ ವ್ಯತ್ಯಾಸವಿಲ್ಲ: ಶರದ್ ಪವಾರ್‌

Update: 2024-04-14 16:51 GMT

ಶರದ್ ಪವಾರ್ |  PC : PTI

ಸೋಲಾಪುರ: ಪ್ರಧಾನಿ ನರೇಂದ್ರ ಮೋದಿ ಮತ್ತು ರಶ್ಯದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಹೇಳಿರುವ ಎನ್ಸಿಪಿ (ಎಸ್ಪಿ) ವರಿಷ್ಠ ಶರದ್ ಪವಾರ್ ಅವರು, ಮೋದಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ನಿಧಾನವಾಗಿ ನಾಶಗೊಳಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಢಾ ಮತ್ತು ಸೋಲಾಪುರ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಕುರಿತು ಚರ್ಚಿಸಲು ರವಿವಾರ ಸೋಲಾಪುರ ಜಿಲ್ಲೆಯ ಅಕ್ಲುಜ್ ನಲ್ಲಿ ಮಾಜಿ ಉಪಮುಖ್ಯಮಂತ್ರಿ ವಿಜಯಸಿಂಹ ಮೊಹಿತೆ ಪಾಟೀಲ್ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಪವಾರ್ ಸುದ್ದಿಗಾರರೊಂದಿಗೆ ಮಾತನಾಡಿದರು.

ವಿರೋಧ ಪಕ್ಷಗಳಿಗೆ ಸೇರಿದ ಯಾರೂ ಚುನಾವಣೆಗಳಲ್ಲಿ ಆಯ್ಕೆಯಾಗುವುದನ್ನು ಮೋದಿ ಬಯಸುವುದಿಲ್ಲ. ಪ್ರಧಾನಿಯವರ ಇಂತಹ ನಿಲುವು ಅವರಿಗೂ ಪುಟಿನ್ ಗೂ ಯಾವುದೇ ವ್ಯತ್ಯಾಸವಿಲ್ಲ ಎನ್ನುವುದನ್ನು ತೋರಿಸುತ್ತಿದೆ ಎಂದು ಹೇಳಿದ ಪವಾರ್, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಹಾಲಿ ಮುಖ್ಯಮಂತ್ರಿ (ಅರವಿಂದ ಕೇಜ್ರಿವಾಲ್)ಯೋರ್ವರನ್ನು ಬಂಧಿಸಿರುವುದು ಮೋದಿ ಸಂಸದೀಯ ಪ್ರಜಾಪ್ರಭುತ್ವವ ನ್ನು ನಿಧಾನವಾಗಿ ನಾಶಗೊಳಿಸುತ್ತಿದ್ದಾರೆ ಮತ್ತು ದೇಶವು ನಿರಂಕುಶಾಧಿಕಾರದತ್ತ ಸಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷವು ಆಡಳಿತ ಪಕ್ಷದಷ್ಟೇ ಮಹತ್ವವನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು.

ಲೋಕಸಭಾ ಚುನಾವಣೆಗಳಿಗೆ ಬಿಜೆಪಿ ಪ್ರಣಾಳಿಕೆ ಕುರಿತು ಪ್ರಶ್ನೆಗೆ ಪವಾರ್,ಅವರ ಪ್ರಣಾಳಿಕೆಯ ಬಗ್ಗೆ ಪ್ರತಿಕ್ರಿಯಿಸಲು ಇದು ಸರಿಯಾದ ಸಮಯವಲ್ಲ. ಆದರೂ ಭರವಸೆಗಳನ್ನು ನೀಡುವುದು ಬಿಜೆಪಿಯ ವೈಶಿಷ್ಟ್ಯವಾಗಿದೆ ಎಂದು ಉತ್ತರಿಸಿದರು.

ವಿಜಯಸಿಂಹ ಮೊಹಿತೆ ಪಾಟೀಲ್ ಅವರ ಸೋದರ ಪುತ್ರ ಧೈರ್ಯಶೀಲ ಮೊಹಿತೆ ಪಾಟೀಲ್ ಅವರು ಇತ್ತೀಚಿಗೆ ಬಿಜೆಪಿಯನ್ನು ತೊರೆದಿದ್ದು, ಎನ್ಸಿಪಿ (ಎಸ್ಪಿ)ಗೆ ಸೇರುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಿಜಯಸಿಂಹ ನಿವಾಸಕ್ಕೆ ಭೇಟಿ ನೀಡಿದ್ದ ಪವಾರ್, ಧೈರ್ಯಶೀಲ ಮಾಢಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಾವು ಬಯಸಿದ್ದೇವೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News