ಮೋದಿ ಮುಂದೊಂದು ದಿನ ಈ ದೇಶವನ್ನೇ ಮಾರಿಬಿಡುತ್ತಾರೆ: ಖರ್ಗೆ ವಾಗ್ದಾಳಿ

PC : PTI
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತನ್ನ ದಾಳಿಯನ್ನು ಬುಧವಾರ ಇನ್ನಷ್ಟು ಹರಿತಗೊಳಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಗಣಿಗಾರಿಕೆಯಿಂದ ಹಿಡಿದು ವಿಮಾನ ನಿಲ್ದಾಣಗಳವರೆಗೆ ಪ್ರತಿಯೊಂದನ್ನೂ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಹಸ್ತಾಂತರಿಸುತ್ತಿರುವ ಮೋದಿ ಸರಕಾರವು ಮುಂದೊಂದು ದಿನ ಇಡೀ ದೇಶವನ್ನೇ ಮಾರಾಟ ಮಾಡಲಿದೆ ಎಂದು ಹೇಳಿದರು.
ಅಹ್ಮದಾಬಾದ್ ನಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ಮಾತನಾಡಿದ ಖರ್ಗೆ, ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡಲಾಗುತ್ತಿದೆ. ಎಸ್‌ಸಿ/ಎಸ್‌ಟಿಗಳು ಮತ್ತು ಒಬಿಸಿಗಳಿಗೆ ಮೀಸಲಾತಿಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಮೋದಿಯವರು ಇಡೀ ದೇಶವನ್ನೇ ಮಾರಾಟ ಮಾಡುತ್ತಾರೆ ಎಂದು ಹೇಳಿದರು.
ಶ್ರೀಮಂತರು ಮತ್ತು ನಿರುದ್ಯೋಗದಿಂದ ಪಾರಾಗಲು ಯುವಜನರು ದೇಶವನ್ನು ತೊರೆಯುತ್ತಿದ್ದಾರೆ ಎಂದು ಬೆಟ್ಟು ಮಾಡಿದ ಅವರು, ಕೈಕೋಳಗಳೊಂದಿಗೆ ಭಾರತೀಯ ಯವಜನರ ವಾಪಸಾತಿಯ ಬಗ್ಗೆ ಪ್ರಧಾನಿಯವರ ಮೌನವನ್ನೂ ಪ್ರಶ್ನಿಸಿದರು.
ಪ್ರಧಾನಿ ಮೋದಿಯವರ ಅಡಿ ಚುನಾವಣಾ ಆಯೋಗ ಸೇರಿದಂತೆ ಯಾವುದೇ ಸಂಸ್ಥೆಯು ಸುರಕ್ಷಿತವಾಗಿಲ್ಲ ಎಂದು ಖರ್ಗೆ ಕಿಡಿಕಾರಿದರು.