ಮುಹಮ್ಮದ್ ಝುಬೇರ್ ವಿರುದ್ಧ ಭಾರತದ ಸಾರ್ವಭೌಮತೆ ಮತ್ತು ಏಕತೆಗೆ ಧಕ್ಕೆ ತಂದ ಪ್ರಕರಣ ದಾಖಲು : ಅಲಹಾಬಾದ್ ಹೈಕೋರ್ಟ್ ಗೆ ಮಾಹಿತಿ
ಅಲಹಾಬಾದ್ : ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಹಾಗೂ ಪತ್ರಕರ್ತ ಮುಹಮ್ಮದ್ ಝುಬೇರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 152ರ ಅಡಿ ಭಾರತದ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆಗೆ ಧಕ್ಕೆ ತಂದ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾಧಿಕಾರಿಯು ಅಲಹಾಬಾದ್ ಹೈಕೋರ್ಟ್ ಗೆ ತಿಳಿಸಿದ್ದಾರೆ ಎಂದು barandbench.com ವರದಿ ಮಾಡಿದೆ.
ಮುಹಮ್ಮದ್ ಝುಬೇರ್ ಎಕ್ಸ್ ನಲ್ಲಿ ಮಾಡಿದ್ದ ಪೋಸ್ಟ್ ವಿರುದ್ಧ ಘಾಝಿಯಾಬಾದ್ ನ ದಸ್ನಾ ದೇವಿ ದೇವಾಲಯದ ಅರ್ಚಕ ಯತಿ ನರಸಿಂಗಾನಂದ ಬೆಂಬಲಿಗರು ಸಲ್ಲಿಸಿದ್ದ ದೂರನ್ನು ಆಧರಿಸಿ ಈ ಎಫ್ ಐ ಆರ್ ದಾಖಲಿಸಿಕೊಳ್ಳಲಾಗಿದೆ. ಹೀಗಾಗಿ, ತಮಗೆ ಬಂಧನದಿಂದ ರಕ್ಷಣೆ ನೀಡಬೇಕು ಎಂದು ಕೋರಿ ಮುಹಮ್ಮದ್ ಝುಬೇರ್ ಅಲಹಾಬಾದ್ ಹೈಕೋರ್ಟ್ ನ ಮೊರೆ ಹೋಗಿದ್ದರು.
ಮುಹಮ್ಮದ್ ಝುಬೇರ್ ವಿರುದ್ಧ ಯಾವ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ಮುಂದಿನ ವಿಚಾರಣೆಯ ದಿನಾಂಕದಂದು ಪ್ರಮಾಣ ಸಲ್ಲಿಸುವಂತೆ ನವೆಂಬರ್ 25ರಂದು ಅಲಹಾಬಾದ್ ಹೈಕೋರ್ಟ್ ತನಿಖಾಧಿಕಾರಿಗೆ ಸೂಚಿಸಿತ್ತು.
ಬುಧವಾರ ನ್ಯಾಯಾಲಯಕ್ಕೆ ಪ್ರತಿಕ್ರಿಯೆ ಸಲ್ಲಿಸಿದ ತನಿಖಾಧಿಕಾರಿಯು, ಎಫ್ ಐ ಆರ್ ಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಹಾಗೂ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 62 ಸೇರಿ ಎರಡು ಹೊಸ ಸೆಕ್ಷನ್ ಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ತಿದ್ದುಪಡಿಗೆ ಅವಕಾಶ ನೀಡಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಿತು.
ಈ ಹಿಂದಿನ ಸಾರ್ವಜನಿಕ ಭಾಷಣಗಳಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸೆಪ್ಟೆಂಬರ್ 29ರಂದು ನರಸಿಂಗಾನಂದ ವಿರುದ್ಧ ದ್ವೇಷ ಭಾಷಣದ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಮುಹಮ್ಮದ್ ಝುಬೇರ್, ಅವರ ಭಾಷಣಗಳನ್ನು ಅವಹೇಳನಕಾರಿ ಹಾಗೂ ದ್ವೇಷಪೂರಿತ ಎಂದು ಆರೋಪಿಸಿದ್ದರು.
ನಂತರ, ಕೋಮು ದ್ವೇಷಕ್ಕೆ ಪ್ರಚೋದನೆ ನೀಡಿದ ಹಾಗೂ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡಿದ ಆರೋಪದ ಮೇಲೆ ನರಸಿಂಗಾನಂದ ವಿರುದ್ಧ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣಗಳಲ್ಲಿ ಹಲವು ಎಫ್ ಐ ಆರ್ ಗಳು ದಾಖಲಾಗಿದ್ದವು. ಇದಾದ ಬಳಿಕ, ನರಸಿಂಗಾನಂದ ಬಂಧನವನ್ನು ಘಾಝಿಯಾಬಾದ್ ಪೊಲೀಸರು ನಿರಾಕರಿಸಿದರೂ, ಅವರನ್ನು ಪೊಲೀಸರು ಕರೆದೊಯ್ದಿದ್ದಾರೆ ಎಂದು ಅವರ ನಿಕಟವರ್ತಿಗಳು ಆರೋಪಿಸಿದ್ದರು.
ಇದರ ಬೆನ್ನಿಗೇ, ದಸ್ನಾ ದೇವಿ ದೇವಾಲಯದೆದುರು ಪ್ರತಿಭಟನೆಗಳು ನಡೆದಿದ್ದವು.
ನರಸಿಂಗಾನಂದ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಮುಹಮ್ಮದ್ ಝುಬೇರ್, ಅವರ ಹಳೆಯ ವಿಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ ಎಂದು ಯತಿ ನರಸಿಂಗಾನಂದ ಸರಸ್ವತಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಉದಿತ ತ್ಯಾಗಿ ಅಕ್ಟೋಬರ್ 3ರಂದು ಆರೋಪಿಸಿದ್ದರು. ನಂತರ, ದಸ್ನಾ ದೇವಿ ದೇವಾಲಯದೆದುರು ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಮುಹಮ್ಮದ್ ಝುಬೇರ್, ಅರ್ಶದ್ ಮದನಿ ಹಾಗೂ ಅಸದುದ್ದೀನ್ ಉವೈಸಿ ಕಾರಣ ಎಂದು ಆರೋಪಿಸಿ ಉದಿತ ತ್ಯಾಗಿ ದೂರು ಸಲ್ಲಿಸಿದ್ದರು. ಈ ದೂರನ್ನು ಆಧರಿಸಿ ಮುಹಮ್ಮದ್ ಝುಬೇರ್ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು.
ಘಾಝಿಯಾಬಾದ್ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ ಗಳಾದ 196, 228, 299, 356(3) ಹಾಗೂ 351(2) ಅಡಿ ಮುಹಮ್ಮದ್ ಝುಬೇರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಯತಿ ನರಸಿಂಗಾನಂದರ ಪುನರಾವರ್ತಿತ ಕೋಮುವಾದಿ ಹೇಳಿಕೆಗಳು ಹಾಗೂ ಮಹಿಳೆಯರು ಮತ್ತು ಹಿರಿಯ ರಾಜಕಾರಣಿಗಳ ವಿರುದ್ಧದ ಅವಹೇಳನಕಾರಿ ಹೇಳಿಕೆಗಳ ಕುರಿತು ಬೆಳಕು ಚೆಲ್ಲಲು ನಾನು ಅವರ ಭಾಷಣವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದೆ ಎಂದು ಅಲಹಾಬಾದ್ ಹೈಕೋರ್ಟ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ಮುಹಮ್ಮದ್ ಝುಬೇರ್ ಪ್ರತಿಪಾದಿಸಿದ್ದಾರೆ.
ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐ ಆರ್ ಯು ಪ್ರಚಾರದ ತಂತ್ರ ಎಂದು ಎಕ್ಸ್ ಪೋಸ್ಟ್ ಒಂದರಲ್ಲಿ ದೂರುದಾರರು ಒಪ್ಪಿಕೊಂಡಿದ್ದಾರೆ ಎಂದೂ ತಮ್ಮ ಅರ್ಜಿಯಲ್ಲಿ ಆರೋಪಿಸಿರುವ ಮುಹಮ್ಮದ್ ಝುಬೇರ್, ತಮ್ಮ ಕೃತ್ಯವನ್ನು ಪ್ರಶಂಸಿಸಿದ ಹಿಂಬಾಲಕರೊಬ್ಬರಿಗೆ ಅವರು ಧನ್ಯವಾದ ಸಲ್ಲಿಸಿದ್ದಾರೆ ಎಂದೂ ದೂರಿದ್ದಾರೆ.
ನನ್ನ ವಿರುದ್ಧ ದಾಖಲಾಗಿರುವ ಎಫ್ ಐ ಆರ್, ಯತಿ ನರಸಿಂಗಾನಂದರ ಕ್ರಿಮಿನಲ್ ಚಟುವಟಿಕೆಗಳನ್ನು ಬಯಲು ಮಾಡುವುದರಿಂದ ನನ್ನನ್ನು ತಡೆಯುವ ದುರುದ್ದೇಶ ಹೊಂದಿದೆ ಎಂದೂ ಅವರು ಆಪಾದಿಸಿದ್ದಾರೆ.