ಮುಂಗಾರು ಮಳೆ ಚೇತರಿಕೆ ನಿರೀಕ್ಷೆ: ಆದರೆ ಅನಾವೃಷ್ಟಿ ಖಚಿತ

Update: 2023-09-04 02:51 GMT

ಹೊಸದಿಲ್ಲಿ: ಇದುವರೆಗಿನ ಇತಿಹಾಸದಲ್ಲೇ ಆಗಸ್ಟ್ ನಲ್ಲಿ ಅತ್ಯಂತ ಕನಿಷ್ಠ ಮಳೆಯಾಗಿದ್ದು, ದೇಶದ ಬಹುತೇಕ ಭಾಗಗಳು ಬರದ ದವಡೆಗೆ ಸಿಲುಕಿವೆ.  ಈ ಮಧ್ಯೆ ಈ ವಾರದಲ್ಲಿ 2-3 ದಿಗಳ ಕಾಲ ನೈರುತ್ಯ ಮುಂಗಾರು ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಅಲ್ಪಾವಧಿಯಲ್ಲೇ ಮತ್ತೆ ಮುಂಗಾರು ದುರ್ಬಲಗೊಳ್ಳಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಭಾನುವಾರದ ವರೆಗಿನ ಅಂಕಿ ಅಂಶಗಳ ಪ್ರಕಾರ, ದೇಶಾದ್ಯಂತ ಮಳೆ ಕೊರತೆ ಪ್ರಮಾಣ ಶೇಕಡ 11ರಷ್ಟಾಗಿದೆ. ಕೇಂದ್ರ ಭಾರತದಲ್ಲಿ ಶೇಕಡ 12, ಪರ್ಯಾಯದ್ವೀಪ ಪ್ರದೇಶದಲ್ಲಿ ಶೇಕಡ 14 ಮತ್ತು ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಶೇಕಡ 18ರಷ್ಟು ಮಳೆ ಕೊರತೆ ಇದೆ. ಹವಾಮಾನ ಇಲಾಖೆಯ ಬರ ಸೂಚಕದ ಅಂದಾಜಿನಂತೆ ಭಾರತದ ಬಹುತೇಕ ಭಾಗದಲ್ಲಿ ಒಣ ಪರಿಸ್ಥಿತಿ ಇರುತ್ತದೆ.

ಹವಾಮಾನ ದಾಖಲೆ ಆರಂಭವಾದ 1901 ರಿಂದೀಚೆಗೆ ಅತ್ಯಂತ ಕನಿಷ್ಠ ಮಳೆ ಆಗಸ್ಟ್ ತಿಂಗಳಲ್ಲಿ ಆಗಿದೆ. ಇದುವರೆಗೆ ಆಗಸ್ಟ್ ನಲ್ಲಿ ಕನಿಷ್ಠ ಮಳೆ ದಾಖಲಾಗಿದ್ದ 2005ರಲ್ಲಿ ಮಳೆ ಇಲ್ಲದ 16 ದಿನಗಳಿದ್ದರೆ, ಈ ಬಾರಿ 20 ದಿನಗಳ ಕಾಲ ಮಳೆ ವಿರಾಮ ನೀಡಿತ್ತು.

ಧೀರ್ಘಾವಧಿ ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದು ಬರುವಂತೆ ಮಳೆ ಇಲ್ಲದ ದಿನಗಳು ನಿಧಾನವಾಗಿ ಹೆಚ್ಚುತ್ತಿವೆ. 2005ರ ಆಗಸ್ಟ್ ನಲ್ಲಿ ಮಳೆಕೊರತೆ ಪ್ರಮಾಣ ಶೇಕಡ 25ರಷ್ಟಿದ್ದರೆ, ಈ ವರ್ಷ ಕೊರತೆ ಪ್ರಮಾಣ ಶೇಕಡ 36ಕ್ಕೇರಿದೆ.

"ಬಂಗಾಳಕೊಲ್ಲಿಯ ಈಶಾನ್ಯದಲ್ಲಿ ಬಿರುಗಾಳಿ ಪ್ರಸರಣ ಆರಂಭವಾಗಿದೆ. ಇದರ ಪ್ರಭಾವದಿಂದ ಈಶಾನ್ಯ ಹಾಗೂ ಪಕ್ಕದ ಪಶ್ಚಿಮ- ಕೇಂದ್ರ ಬಂಗಾಳಕೊಲ್ಲಿಯಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲಿ ವಾಯುಭಾರ ಕುಸಿತ ಪ್ರದೇಶ ಸೃಷ್ಟಿಯಾಗುವ ಸಾಧ್ಯತೆ ಇದೆ" ಎಂದು ಇಲಾಖೆ ಭಾನುವಾರ ಪ್ರಕಟಿಸಿದೆ.

ಇದು ಪರ್ಯಾಯದ್ವೀಪ ಪ್ರದೇಶ, ಒಡಿಶಾ, ಛತ್ತೀಸ್ ಗಢದಲ್ಲಿ ಮುಂದಿನ 2-3 ದಿನಗಳಲ್ಲಿ ಮುಂಗಾರು ಮಳೆ ಸ್ಥಿತಿ ಸಕ್ರಿಯವಾಗಲು ಕಾರಣವಾಗಲಿದೆ. ಈಶಾನ್ಯ ಭಾರತ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಚದುರಿದಂತೆ ಮಳೆಯಾಗಲಿದೆ" ಎಂದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News