ಸಂಸದ ಇಂಜಿನಿಯರ್ ರಶೀದ್‌ಗೆ ದಿಲ್ಲಿ ನ್ಯಾಯಾಲಯದಿಂದ ಮಧ್ಯಂತರ ಜಾಮೀನು
ಹೊಸದಿಲ್ಲಿ: ಭಯೋತ್ಪಾದನೆಗೆ ಹಣಕಾಸಿನ ನೆರವು ಪ್ರಕರಣದಲ್ಲಿ ಲೋಕಸಭೆ ಸಂಸದ ಇಂಜಿನಿಯರ್ ರಶೀದ್‌ಗೆ ದಿಲ್ಲಿ ನ್ಯಾಯಾಲಯವು ಅಕ್ಟೋಬರ್ 2ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಇಂಜಿನಿಯರ್ ರಶೀದ್ ಎಂದೇ ಜನಪ್ರಿಯರಾಗಿರುವ ಶೇಖ್ ಅಬ್ದುಲ್ ರಶೀದ್ ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಬಾರಾಮುಲ್ಲಾದಲ್ಲಿ ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಅವರನ್ನು ಸೋಲಿಸಿದ್ದರು.
ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ರಶೀದ್‌ಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ಜಮೀನು ನೀಡಿದರು.
ಅಕ್ಟೋಬರ್ 2ರವರೆಗೆ ಮಧ್ಯಂತರ ಜಾಮೀನು ನೀಡುತ್ತಿದ್ದೇನೆ, ಅಕ್ಟೋಬರ್ 3ರಂದು ಅವರು ಶರಣಾಗಬೇಕು ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ನ್ಯಾಯಾಧೀಶರು ರಶೀದ್‌ಗೆ 2 ಲಕ್ಷ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಶ್ಯೂರಿಟಿಯ ಮೇಲೆ ಜಾಮೀನು ನೀಡಲು ಹೇಳಿದ್ದಾರೆ.
ಸಾಕ್ಷಿಗಳ ಮೇಲೆ ಅಥವಾ ತನಿಖೆಯ ಮೇಲೆ ಪ್ರಭಾವ ಬೀರಬಾರದು ಎಂಬುದೂ ಸೇರಿದಂತೆ ವಿವಿಧ ಷರತ್ತುಗಳನ್ನು ನ್ಯಾಯಾಧೀಶರು ವಿಧಿಸಿದ್ದಾರೆ.
ಜುಲೈ 5 ರಂದು, ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ನ್ಯಾಯಾಲಯ ರಶೀದ್‌ಗೆ ಕಸ್ಟಡಿ ಪೆರೋಲ್ ನೀಡಿತ್ತು.
2017 ರ ಭಯೋತ್ಪಾದಕ ನಿಧಿ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದ ನಂತರ ರಶೀದ್ 2019 ರಿಂದ ಜೈಲಿನಲ್ಲಿದ್ದಾರೆ. ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.
ಅವರ ಸಾಮಾನ್ಯ ಜಾಮೀನು ಅರ್ಜಿಯ ಆದೇಶವನ್ನು ನ್ಯಾಯಾಲಯ ನಾಳೆಗೆ ಕಾಯ್ದಿರಿಸಿದೆ.
ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಗುಂಪುಗಳು ಮತ್ತು ಪ್ರತ್ಯೇಕತಾವಾದಿಗಳಿಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಎನ್‌ಐಎಯಿಂದ ಬಂಧಿಸಲ್ಪಟ್ಟ ಕಾಶ್ಮೀರಿ ಉದ್ಯಮಿ ಜಹೂರ್ ವಾತಾಲಿ ಅವರ ವೇಳೆ ರಶೀದ್ ಅವರು ಹೆಸರು ಈ ಪ್ರಕರಣದಲ್ಲಿ ಸೇರಿಕೊಂಡಿತ್ತು.