ಪಹಲ್ಗಾಮ್‌ ಭಯೋತ್ಪಾದಕ ದಾಳಿ: ಸರ್ವಪಕ್ಷ ಸಭೆಯಿಂದ ಸಣ್ಣ ಪಕ್ಷಗಳನ್ನು ಹೊರಗಿಡುವುದನ್ನು ಪ್ರಶ್ನಿಸಿದ ಸಂಸದ ಉವೈಸಿ

Update: 2025-04-24 15:58 IST
ಪಹಲ್ಗಾಮ್‌ ಭಯೋತ್ಪಾದಕ ದಾಳಿ: ಸರ್ವಪಕ್ಷ ಸಭೆಯಿಂದ ಸಣ್ಣ ಪಕ್ಷಗಳನ್ನು ಹೊರಗಿಡುವುದನ್ನು ಪ್ರಶ್ನಿಸಿದ ಸಂಸದ ಉವೈಸಿ

ಅಸದುದ್ದೀನ್ ಉವೈಸಿ (PTI)

  • whatsapp icon

ಹೊಸದಿಲ್ಲಿ: ಗುರುವಾರ ನಡೆಯಲಿರುವ ಸರ್ವ ಪಕ್ಷಗಳ ಸಭೆಗೆ ಆಯ್ದ ಪಕ್ಷಗಳ ಸಂಸದರಿಗೆ ಮಾತ್ರ ಆಹ್ವಾನ ನೀಡಿರುವುದಕ್ಕೆ ಹೈದರಾಬಾದ್‌ನ AIMIM ಸಂಸದ ಅಸದುದ್ದೀನ್ ಉವೈಸಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡ ಘಟನೆಯ ಬಳಿಕ ಕೇಂದ್ರ ಸರ್ಕಾರ ಗುರುವಾರ ಸರ್ವಪಕ್ಷ ಸಭೆ ಕರೆದಿದೆ. ಸಭೆಗೆ ಆಯ್ದ ಪಕ್ಷಕ್ಕೆ ಆಹ್ವಾನ ನೀಡಲಾಗಿದೆ.

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರೊಂದಿಗಿನ ತಮ್ಮ ಸಂಭಾಷಣೆಯನ್ನು ಉಲ್ಲೇಖಿಸಿದ ಸಂಸದ ಉವೈಸಿ, ಕನಿಷ್ಠ ಐದರಿಂದ 10 ಸಂಸದರನ್ನು ಹೊಂದಿರುವ ಪಕ್ಷಗಳ ಸದಸ್ಯರನ್ನು ಮಾತ್ರ ಆಹ್ವಾನಿಸಲು ಸರ್ಕಾರ ಯೋಜಿಸುತ್ತಿದೆ ಎಂದು ಹೇಳಿದ್ದಾರೆ.

"ನಿನ್ನೆ ರಾತ್ರಿ ನಾನು ಸಚಿವ ಕಿರಣ್ ರಿಜಿಜು ಅವರೊಂದಿಗೆ ಮಾತನಾಡಿದ್ದೆ. ಅವರು 5 ಅಥವಾ 10 ಸಂಸದರನ್ನು ಹೊಂದಿರುವ ಪಕ್ಷಗಳನ್ನು ಮಾತ್ರ ಆಹ್ವಾನಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳಿದರು. ಕಡಿಮೆ ಸಂಸದರನ್ನು ಹೊಂದಿರುವ ಪಕ್ಷಗಳನ್ನು ಏಕೆ ಆಹ್ವಾನಿಸಬಾರದು ಎಂದು ನಾನು ಕೇಳಿದಾಗ, ಸಭೆ ತುಂಬಾ ದೀರ್ಘವಾಗಿರುತ್ತದೆ ಎಂದು ಅವರು ಪ್ರತಿಕ್ರಿಯಿಸಿದರು," ಎಂದು ಅವರು ಉವೈಸಿ X ನಲ್ಲಿನ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.

ನಮ್ಮದೂ ಸಣ್ಣ ಪಕ್ಷ. ನಮ್ಮ ಬಗ್ಗೆ ನಿಮ್ಮ ನಿಲುವು ಏನು? ಎಂದು ಕೇಳಿದ್ದಕ್ಕೆ ಕಿರಣ್ ರಿಜಿಜು ಅವರು ನಿಮ್ಮ ದನಿ ಮೊದಲೇ ತುಂಬಾ ಜೋರಾಗಿದೆ ಎಂದು ತಮಾಷೆ ಮಾಡಿದರು ಎಂದು ಉವೈಸಿ ಹೇಳಿದ್ದಾರೆ.

ಇದನ್ನು ನಿಜವಾದ ಸರ್ವಪಕ್ಷ ಸಭೆಯನ್ನಾಗಿ ಮಾಡಿ ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಕಳವಳಗಳನ್ನು ಆಲಿಸಲು ಹೆಚ್ಚುವರಿ ಸಮಯವನ್ನು ವಿನಿಯೋಗಿಸುವಂತೆ ಒತ್ತಾಯಿಸಿದ ಉವೈಸಿ, “ಇದು ಬಿಜೆಪಿ ಅಥವಾ ಇನ್ನೊಂದು ಪಕ್ಷದ ಆಂತರಿಕ ಸಭೆಯಲ್ಲ, ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡುವ ದೇಶಗಳ ವಿರುದ್ಧ ಬಲವಾದ ಮತ್ತು ಒಗ್ಗಟ್ಟಿನ ಸಂದೇಶವನ್ನು ಕಳುಹಿಸಲು ಇದು ಸರ್ವಪಕ್ಷ ಸಭೆಯಾಗಿದೆ. ಎಲ್ಲಾ ಪಕ್ಷಗಳ ಕಳವಳಗಳನ್ನು ಆಲಿಸಲು ಪ್ರಧಾನಿ ನರೇಂದ್ರ ಮೋದಿ ಹೆಚ್ಚುವರಿ ಗಂಟೆ ಕಳೆಯಲು ಸಾಧ್ಯವಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

“ನಿಮ್ಮ ಸ್ವಂತ ಪಕ್ಷಕ್ಕೆ ಬಹುಮತವಿಲ್ಲ. ಅದು 1 ಸಂಸದರನ್ನು ಹೊಂದಿರುವ ಪಕ್ಷವಾಗಲಿ ಅಥವಾ 100 ಸಂಸದರನ್ನು ಹೊಂದಿರುವ ಪಕ್ಷವಾಗಲಿ, ಎಲ್ಲರೂ ಭಾರತೀಯರಿಂದ ಆಯ್ಕೆಯಾಗಿದ್ದಾರೆ. ಇದು ರಾಜಕೀಯ ವಿಷಯವಲ್ಲ, ಇದು ರಾಷ್ಟ್ರೀಯ ವಿಷಯವಾಗಿದೆ. ಎಲ್ಲರಿಗೂ ಅವಕಾಶ ನೀಡಬೇಕು. ನರೇಂದ್ರ ಮೋದಿಯವರು ಇದನ್ನು ನಿಜವಾದ ಸರ್ವಪಕ್ಷ ಸಭೆಯನ್ನಾಗಿ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ. ಸಂಸತ್ತಿನಲ್ಲಿ ಒಬ್ಬ ಸಂಸದರನ್ನು ಹೊಂದಿರುವ ಪ್ರತಿಯೊಂದು ಪಕ್ಷವನ್ನು ಆಹ್ವಾನಿಸಬೇಕು” ಎಂದು ಉವೈಸಿ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News