ಕಾಶ್ಮೀರದಲ್ಲಿ ವಿದೇಶಿ ನಿಯೋಗಗಳಿಗೆ ನೀಡಿದ ಭದ್ರತೆ ಪ್ರವಾಸಿಗರಿಗೇಕಿಲ್ಲ?: ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಪ್ರಶ್ನೆ

Update: 2025-04-24 13:15 IST
ಕಾಶ್ಮೀರದಲ್ಲಿ ವಿದೇಶಿ ನಿಯೋಗಗಳಿಗೆ ನೀಡಿದ ಭದ್ರತೆ ಪ್ರವಾಸಿಗರಿಗೇಕಿಲ್ಲ?: ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಪ್ರಶ್ನೆ

ಸಾಕೇತ್ ಗೋಖಲೆ (Photo: PTI)

  • whatsapp icon

ಹೊಸದಿಲ್ಲಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಎಪ್ರಿಲ್ 22 ರಂದು ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೋದಿ ಸರಕಾರವು ಮುಗ್ಧ ಭಾರತೀಯ ಪ್ರವಾಸಿಗರ ಜೀವಗಳನ್ನು ರಕ್ಷಿಸಲು ವಿಫಲವಾಗಿದೆ. ಕಾಶ್ಮೀರದಕ್ಕೆ ಭೇಟಿ ನೀಡುವ ವಿದೇಶಿ ನಿಯೋಗಗಳಿಗೆ ಒದಗಿಸಲಾಗುವ ಭದ್ರತೆ ಮತ್ತು ರಕ್ಷಣೆಗೆ ಪ್ರವಾಸಿಗರು ಅರ್ಹರಾಗಿಲ್ಲವೇ? ಎಂದು ಟಿಎಂಸಿಯ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಮಾಡಿರುವ ದೀರ್ಘವಾದ ಪೋಸ್ಟ್ ನಲ್ಲಿ ಅವರು, ಕಳೆದ ಎರಡು ದಿನಗಳ ಹಿಂದೆ ನಡೆದ ಘಟನೆಗಳು ಆಘಾತಕಾರಿಯಾಗಿದೆ. ಅದು ಸ್ವೀಕಾರಾರ್ಹವಲ್ಲ. ಈ ರೀತಿಯ ಘಟನೆಗಳಾದಾಗ ಸರಕಾರವು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಮಾಧ್ಯಮಗಳು ಕೋಮುವಾದಿ ಕಾರ್ಯಸೂಚಿಯನ್ನು ಹರಡುತ್ತಾ ಸರ್ಕಾರದ ವೈಫಲ್ಯಗಳನ್ನು ಸಕ್ರಿಯವಾಗಿ ಮರೆಮಾಚುತ್ತಿವೆ. ಇದಕ್ಕೆ ನಾವು ಎಷ್ಟು ಸಮಯ ಅವಕಾಶ ನೀಡುತ್ತೇವೆ ಎಂದು ಪ್ರಶ್ನಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಕ್ಕೂ ಹೆಚ್ಚು ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಕೇಳಿ ತುಂಬಾ ದುಃಖವಾಗಿದೆ. ನನ್ನ ಮತ್ತು ಇಡೀ ದೇಶದ ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬದೊಂದಿಗಿದೆ ಎಂದು ಅವರು ಹೇಳಿದ್ದಾರೆ.

ವರ್ಷಗಳಿಂದ, ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲವೂ ಸಾಮಾನ್ಯವಾಗಿದೆ ಎಂದು ಹೆಮ್ಮೆಪಡುತ್ತಲೇ ಇತ್ತು. ಸಂಸತ್ತಿನಲ್ಲಿ, ಮೋದಿ ಮತ್ತು ಶಾ ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲವೂ ಪರಿಪೂರ್ಣವಾಗಿದೆ ಎಂದು ಹೇಳುತ್ತಲೇ ಇದ್ದರು. ಕಾಶ್ಮೀರಕ್ಕೆ ವಿದೇಶಿ ನಿಯೋಗಗಳನ್ನು ಕರೆದೊಯ್ಯಲಾಗುತ್ತಿದೆ ಎಂಬ ನಿರಂತರ ಪ್ರಚಾರವು ನಡೆಯುತ್ತಿತ್ತು ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ.

ಆದರೆ ಮೋದಿ ಸರ್ಕಾರವು ಸಾಮಾನ್ಯ ಪ್ರವಾಸಿಗರಿಗೆ ರಕ್ಷಣೆ ನೀಡಲು ವಿಫಲವಾಗಿದೆ. ಕಳೆದ 24 ಗಂಟೆಗಳಲ್ಲಿ ಗುಪ್ತಚರ ವೈಫಲ್ಯದ ಪ್ರಾಮಾಣಿಕ ಚರ್ಚೆಯೂ ನಡೆದಿಲ್ಲ. ಈ ಕುರಿತು ಒಂದೇ ಒಂದು ಮಾಧ್ಯಮ ಸಂಸ್ಥೆಯೂ ಯಾವುದೇ ಪ್ರಶ್ನೆಗಳನ್ನು ಎತ್ತಿಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

ಮೋದಿ ಸರ್ಕಾರವನ್ನು ರಕ್ಷಿಸಲು ಬಿಜೆಪಿ ಮತ್ತು ಮಾಧ್ಯಮಗಳು ಎಷ್ಟು ಸಮಯದವರೆಗೆ ಅಮಾಯಕ ಭಾರತೀಯರ ಸಾವನ್ನು ಮರೆಮಾಚುತ್ತವೆ. ಅಮಿತ್ ಶಾ ಅವರು ತಮ್ಮ ಕೆಲಸದಲ್ಲಿ ವಿಫಲರಾಗಿದ್ದಾರೆಂದು ಒಪ್ಪಿಕೊಂಡು ಮೃತರ ಕುಟುಂಬಗಳ ಬಳಿ ಏಕೆ ಕ್ಷಮೆಯಾಚಿಸುತ್ತಿಲ್ಲ? ಎಂದು ಟಿಎಂಸಿ ನಾಯಕ ಪ್ರಶ್ನಿಸಿದ್ದಾರೆ.

ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳು ದಾಳಿಯಲ್ಲಿ ಭಾಗಿಯಾದ ಭಯೋತ್ಪಾದಕರನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುತ್ತವೆ ಎಂದು ನನಗೆ ವಿಶ್ವಾಸವಿದೆ. ಆದರೆ ಈ ದುರಂತವನ್ನು ಕೋಮು ದ್ವೇಷವನ್ನು ಪ್ರಚೋದಿಸಲು ಬಿಜೆಪಿ ಸಕ್ರಿಯವಾಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

ಭಾರತೀಯರು ತಮ್ಮ ಜೀವಗಳನ್ನು ಕಳೆದುಕೊಂಡಾಗ ರಾಜಕೀಯ ಪಕ್ಷ ಎಷ್ಟು ಕೆಳಮಟ್ಟಕ್ಕೆ ಇಳಿಯಬಹುದು? ಬಿಜೆಪಿಗೇಕೆ ಕೊಳಕು ರಾಜಕೀಯದಿಂದ ಒಂದೇ ಒಂದು ಮೃತದೇಹವನ್ನು ಬಿಟ್ಟು ಬಿಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಈ ನಡುವೆ ಮೋದಿ ಮತ್ತು ಶಾ ಮಾಡಬಹುದಾದ ಕನಿಷ್ಠ ಕೆಲಸವೆಂದರೆ ಈ ದಾಳಿಗೆ ಕಾರಣವಾದ ವೈಫಲ್ಯಕ್ಕೆ ಕ್ಷಮೆಯಾಚಿಸುವುದು. ಇದು ಮೂಲಭೂತ ಹೊಣೆಗಾರಿಕೆ. ಅದನ್ನು ಒತ್ತಾಯಿಸುವುದು ಮಾಧ್ಯಮದ ಕೆಲಸ ಎಂದು ಅವರು ಹೇಳಿದ್ದಾರೆ.

ನಮ್ಮ ಸಶಸ್ತ್ರ ಪಡೆಗಳು ದಾಳಿಕೋರರನ್ನು ಹೊಡೆದು ಹಾಕಿದಾಗ, ಮೋದಿ ಮತ್ತು ಶಾ ಅವರು ಮಾಧ್ಯಮಗಳಲ್ಲಿ ನಾಚಿಕೆಯಿಲ್ಲದೆ ಕ್ರೆಡಿಟ್ ಪಡೆಯುವ ಮೊದಲಿಗರು ಎಂದು ಅವರು ವ್ಯಂಗ್ಯವಾಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News