ಮುರ್ಶಿದಾಬಾದ್ ಹಿಂಸಾಚಾರ ಪ್ರಕರಣ | ಮಹಿಳೆಯರ ಮೇಲಿನ ಕಿರುಕುಳದ ತನಿಖೆಗೆ ಎನ್‌ಸಿಡಬ್ಲ್ಯುನಿಂದ ಸಮಿತಿ ರಚನೆ

PC : PTI
ಹೊಸದಿಲ್ಲಿ: ಪಶ್ಚಿಮಬಂಗಾಳದ ಮುರ್ಶಿದಾಬಾದ್ ನಲ್ಲಿ ಇತ್ತೀಚೆಗೆ ನಡೆದ ಕೋಮ ಹಿಂಸಾಚಾರದ ಸಂದರ್ಭ ಮಹಿಳೆಯರಿಗೆ ಕಿರುಕುಳ ಹಾಗೂ ಅವರ ಸ್ಥಳಾಂತರ ಆರೋಪದ ಕುರಿತು ತನಿಖೆ ನಡೆಸಲು ತನಿಖಾ ಸಮಿತಿಯೊಂದನ್ನು ರೂಪಿಸಲಾಗಿದೆ ಎಂದು ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗ (ಎನ್‌ಸಿಡಬ್ಲ್ಯು)ಘೋಷಿಸಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ವಿಜಯಾ ರತ್ನಾಕರ್ ಅವರು ಈ ಘಟನೆಯನ್ನು ಸ್ವಯಂಪ್ರೇರಿತವಾಗಿ ಪರಿಗಣಿಸಿದ್ದಾರೆ. ಪರಿಸ್ಥಿತಿ ಅವಲೋಕಿಸಲು ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಸಂತ್ರಸ್ತರನ್ನು ಭೇಟಿಯಾಗಿದ್ದಾರೆ ಎಂದು ಹೇಳಿಕೆ ತಿಳಿಸಿದೆ.
ವಕ್ಫ್ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಸುತಿ, ಧುಲಿಯಾನ್ ಹಾಗೂ ಜಂಗಿಪುರ ಸೇರಿದಂತೆ ಮುರ್ಶಿದಾಬಾದ್ ನ ಹಲವು ಪ್ರದೇಶಗಳಲ್ಲಿ ಎಪ್ರಿಲ್ 11 ಹಾಗೂ 12ರಂದು ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ ಕನಿಷ್ಠ 3 ಮಂದಿ ಸಾವನ್ನಪ್ಪಿದ್ದರು, ಹಲವರು ಗಾಯಗೊಂಡಿದ್ದರು.
ಧುಲಿಯಾನ್‌ನ ಮಂದಿರಪಾರಾ ಪ್ರದೇಶದಲ್ಲಿ ಹಿಂಸಾಚಾರದ ಸಂದರ್ಭ ಹಲವು ಮಹಿಳೆಯರಿಗೆ ಕಿರುಕುಳ ನೀಡಲಾಗಿತ್ತು. ಈ ಹಿಂಸಾಚಾರದಿಂದಾಗಿ ನೂರಾರು ಮಹಿಳೆಯ ತಮ್ಮ ಮನೆ ತ್ಯಜಿಸಿ ಪರಾರಿಯಾದರು. ಹಲವರು ಭಾಗೀರಥಿ ನದಿ ದಾಟಿ ನೆರೆಯ ಮಾಲ್ಡಾ ಜಿಲ್ಲೆಯಲ್ಲಿ ಆಶ್ರಯ ಪಡೆದುಕೊಂಡಿದ್ದರು ಎಂದು ಆಯೋಗ ಹೇಳಿದೆ.