ಪ್ರಧಾನಿ ನರೇಂದ್ರ ಮೋದಿಗೆ ಶ್ರೀಕೃಷ್ಣನ ವರ್ಣಚಿತ್ರದ ಉಡುಗೊರೆ ನೀಡಿದ್ದ ಮುಸ್ಲಿಂ ಮಹಿಳೆಯ ವಿರುದ್ಧ ಗಲಭೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲು!

ನರೇಂದ್ರ ಮೋದಿ | PC : PTI
ತಿರುವನಂತಪುರಂ: ಶ್ರೀಕೃಷ್ಣ ವರ್ಣಚಿತ್ರಗಳನ್ನು ಬಿಡಿಸಲು ಹೆಸರಾಗಿರುವ ಹಾಗೂ ಒಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶ್ರೀಕೃಷ್ಣನ ಒಂದು ವರ್ಣಚಿತ್ರವನ್ನು ಉಡುಗೊರೆಯನ್ನಾಗಿಯೂ ನೀಡಿದ್ದ ಮುಸ್ಲಿಂ ಮಹಿಳೆಯೊಬ್ಬರ ವಿರುದ್ಧ ಇದೀಗ ಗಲಭೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಾಗಿದೆ.
ಪ್ರಸಿದ್ಧ ಗುರುವಾಯೂರ್ ಶ್ರೀ ಕೃಷ್ಣ ದೇವಾಲಯದೆದುರಿನ ಶ್ರೀ ಕೃಷ್ಣನ ವಿಗ್ರಹಕ್ಕೆ ಮಾಲಾರ್ಪಣೆ ಮಾಡಿ, ಅದನ್ನು ವಿಡಿಯೊ ಚಿತ್ರೀಕರಣ ಮಾಡಿದ್ದಕ್ಕಾಗಿ ಅವರ ವಿರುದ್ಧ ಈ ಪ್ರಕರಣ ದಾಖಲಾಗಿದೆ.
ದೇವಾಲಯದ ದ್ವಾರದಲ್ಲಿ ವಿಡಿಯೊ ಚಿತ್ರೀಕರಣ ನಡೆಸುವುದಕ್ಕೆ ಕೇರಳ ಹೈಕೋರ್ಟ್ ವಿಧಿಸಿದ್ದ ನಿರ್ಬಂಧವನ್ನು ಉಲ್ಲಂಘಿಸಿದ ಆರೋಪದ ಮೇಲೆ, ಕೋಯಿಕ್ಕೋಡ್ ಜಿಲ್ಲೆಯ ಕೋಯಿಲಾಂಡಿ ನಿವಾಸಿ ಜಸ್ನಾ ಸಲೀಂ ಇದೀಗ ಸಮಸ್ಯೆಯ ಸುಳಿಗೆ ಸಿಲುಕಿಕೊಂಡಿದ್ದಾರೆ.
ಇತ್ತೀಚೆಗೆ ದೇವಾಲಯದ ದ್ವಾರದ ಬಳಿಯಿರುವ ಶ್ರೀ ಕೃಷ್ಣನ ವಿಗ್ರಹಕ್ಕೆ ಕಾಗದದ ಮಾಲಾರ್ಪಣೆ ಮಾಡುತ್ತಿರುವ ವಿಡಿಯೊವನ್ನು ಜಸ್ನಾ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದರು. ಜಸ್ನಾರ ಈ ನಡೆಯ ವಿರುದ್ಧ ದೇವಾಲಯದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು. ಈ ದೂರನ್ನು ಆಧರಿಸಿ ಗುರುವಾಯೂರ್ ದೇವಾಲಯದ ಪೊಲೀಸರು, ಪ್ರಚೋದನೆಯ ಉದ್ದೇಶ ಹಾಗೂ ನ್ಯಾಯಾಂಗ ನಿಂದನೆಯ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ, ಜಸ್ನಾ ಪೋಸ್ಟ್ ಮಾಡಿದ್ದ ಜನ್ಮದಿನಾಚರಣೆಯ ವೇಳೆ ಕೇಕ್ ಕತ್ತರಿಸುತ್ತಿರುವ ವಿಡಿಯೊ ಕುರಿತು ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ, ದೇವಾಲಯದ ದ್ವಾರದಲ್ಲಿ ವಿಡಿಯೊ ಚಿತ್ರೀಕರಣ ನಡೆಸುವುದಕ್ಕೆ ಕೇರಳ ಹೈಕೋರ್ಟ್ ನಿರ್ಬಂಧ ವಿಧಿಸಿತ್ತು.
ಕಳೆದ ಹತ್ತು ವರ್ಷಗಳಿಂದ ಶ್ರೀ ಕೃಷ್ಣನ ವರ್ಣಚಿತ್ರಗಳನ್ನು ಬಿಡಿಸುತ್ತಿರುವ ಜಸ್ನಾ, ಕರ್ಮಠ ಮುಸ್ಲಿಂ ಹಾಗೂ ಹಿಂದೂ ವಲಯಗಳೆರಡರಿಂದಲೂ ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ. ಅವರ ವರ್ಣಚಿತ್ರಗಳು ಭಾರಿ ಗಮನ ಸೆಳೆದಿದ್ದು, ಗುರುವಾಯೂರ್ ದೇವಾಲಯ ಸೇರಿದಂತೆ ಹಲವಾರು ದೇವಾಲಯಗಳು ಅವರ ವರ್ಣಚಿತ್ರಗಳನ್ನು ಹೊಂದಿವೆ.
ಕಳೆದ ವರ್ಷ ರಾಜ್ಯ ದರ್ಜೆಯ ಕೇಂದ್ರ ಸಚಿವ ಸುರೇಶ್ ಗೋಪಿಯವರ ಪುತ್ರಿಯ ವಿವಾಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ್ದಾಗ, ಅವರು ತಮ್ಮ ವರ್ಣಚಿತ್ರವನ್ನು ಪ್ರಧಾನಿಗೆ ಉಡುಗೊರೆ ನೀಡಿದ್ದರು.
ತಾವು ಜಸ್ಮಾರಿಂದ ಸ್ವೀಕರಿಸಿದ್ದ ವರ್ಣಚಿತ್ರದ ಭಾವಚಿತ್ರವೊಂದನ್ನು ಪ್ರಧಾನಿ ನರೇಂದ್ರ ಮೋದಿ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಟ್ವೀಟ್ ಮಾಡಿ, “ಗುರುವಾಯೂರ್ ನಲ್ಲಿ ನಾನು ಜಸ್ನಾ ಸಲೀಂ ಅವರಿಂದ ಶ್ರೀಕೃಷ್ಣನ ವರ್ಣಚಿತ್ರವನ್ನು ಉಡುಗೊರೆಯಾಗಿ ಸ್ವೀಕರಿಸಿದೆ. ಅವರ ಶ್ರೀಕೃಷ್ಣನ ಭಕ್ತಿಯ ಪಯಣವು ಪರಿವರ್ತನಾಕಾರಿ ಭಕ್ತಿಯ ಶಕ್ತಿಗೆ ಸಾಕ್ಷಿಯಾಗಿದೆ. ಅವರು ಪ್ರಮುಖ ಹಬ್ಬಗಳು ಸೇರಿದಂತೆ, ಹಲವಾರು ವರ್ಷಗಳಿಂದ ಗುರುವಾಯೂರ್ ನಲ್ಲಿ ಶ್ರೀ ಕೃಷ್ಣನ ವರ್ಣಚಿತ್ರಗಳನ್ನು ಉಡುಗೊರೆ ನೀಡುತ್ತಿದ್ದಾರೆ” ಎಂದು ಶ್ಲಾಘಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ವರ್ಣಚಿತ್ರವೊಂದನ್ನು ಉಡುಗೊರೆ ನೀಡುವ ಅವಕಾಶ ದೊರೆತದ್ದು ನನ್ನ ಜೀವನದಲ್ಲಿ ಬಹು ದೊಡ್ಡ ತಿರುವಾಗಿದ್ದರೂ, ಇದಾದ ನಂತರ, ಹಲವಾರು ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಕರ್ತರು ನನ್ನ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ನನಗೆ ಜೀವಿಸಲು ಅವಕಾಶ ನೀಡುತ್ತಿಲ್ಲ ಎಂದು ಇತ್ತೀಚೆಗೆ ಜಸ್ಮಾ ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದರಲ್ಲಿ ಅಳಲು ತೋಡಿಕೊಂಡಿದ್ದರು.
ಇದಲ್ಲದೆ, ಗುರುವಾಯೂರ್ ದೇವಾಲಯದ ದ್ವಾರದ ಬಳಿ ತಾವು ತಲೆಗೆ ಹೊದಿಕೆ ಧರಿಸಿಕೊಂಡು ನಿಂತುಕೊಳ್ಳುವುದಕ್ಕಾಗಿ ಕರ್ಮಠ ಹಿಂದೂ ಕಾರ್ಯಕರ್ತರಿಂದ ಜಸ್ಮಾ ಪದೇ ಪದೇ ಟೀಕೆಗೂ ಒಳಗಾಗಿದ್ದರು.
ಸುಮಾರು ಹತ್ತು ವರ್ಷಗಳ ಹಿಂದೆ ಕಾಗದದ ತುಂಡೊಂದರ ಮೇಲೆ ಕಂಡು ಬಂದಿದ್ದ ಶ್ರೀಕೃಷ್ಣನ ಚಿತ್ರವನ್ನು ಬಿಡಿಸುವ ಮೂಲಕ, ಜಸ್ಮಾ ಅವರು ಶ್ರೀ ಕೃಷ್ಣನ ವರ್ಣಚಿತ್ರಗಳನ್ನು ಬಿಡಿಸುವ ಆಕರ್ಷಣೆಗೆ ಒಳಗಾಗಿದ್ದರು. ಆ ಚಿತ್ರವು ಚೆನ್ನಾಗಿ ಮೂಡಿ ಬಂದಿದ್ದರಿಂದ ಹಾಗೂ ಆಕೆಯ ಪತಿ ಆಕೆಯನ್ನು ಹುರಿದುಂಬಿಸಿದ್ದರಿಂದ, ಆಕೆ ಮತ್ತಷ್ಟು ಶ್ರೀ ಕೃಷ್ಣನ ವರ್ಣಚಿತ್ರಗಳನ್ನು ಬಿಡಿಸಲು ಪ್ರಾರಂಭಿಸಿದ್ದರು. ಅವರೀಗ ವಿದೇಶಗಳಿಂದಲೂ ಶ್ರೀಕೃಷ್ಣನ ವರ್ಣಚಿತ್ರಗಳಿಗೆ ಬೇಡಿಕೆಗಳನ್ನು ಸ್ವೀಕರಿಸುತ್ತಿದ್ದಾರೆ.
ಸೌಜನ್ಯ: deccanherald.com