‘ಮೈ ಲಾರ್ಡ್, ನಮ್ಮ ದೇಶವನ್ನು ರಕ್ಷಿಸಿ’: ಮಮತಾ ಬ್ಯಾನರ್ಜಿ

Update: 2023-08-12 16:49 GMT

ಮಮತಾ ಬ್ಯಾನರ್ಜಿ | Photo: PTI 

ಕೋಲ್ಕತಾ: ಮುಖ್ಯ ಚುನಾವಣಾಧಿಕಾರಿ (ಸಿಇಸಿ) ಹಾಗೂ ಚುನಾವಣಾ ಆಯುಕ್ತ(ಇಸಿ) ರನ್ನು ನೇಮಿಸುವ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಹೊರಗಿಡುವ ಕೇಂದ್ರ ಸರಕಾರದ ಪ್ರಸ್ತಾವಿತ ಕಾನೂನನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರದ ಆಡಳಿತಾರೂಢ ಬಿಜೆಪಿಯು ಅರಾಜಕತೆಗೆ ಶರಣಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘‘ಮುಖ್ಯ ಚುನಾವಣಾ ಆಯುಕ್ತರನ್ನು ನೇಮಿಸುವ ತ್ರಿಸದಸ್ಯ ಸಮಿತಿಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯವರ ಪಾತ್ರ ಮಹತ್ವದ್ದಾಗಿದೆ’’ ಎಂದು ಬ್ಯಾನರ್ಜಿ ಅವರು ‘ಎಕ್ಸ್’ (ಹಿಂದಿನ ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಚುನಾವಣಾ ಆಯುಕ್ತರ ನೇಮಕಾತಿ ಮಾಡುವ ತ್ರಿಸದಸ್ಯ ಸಮಿತಿಯಲ್ಲಿ ಸಿಜೆಐ ಬದಲಿಗೆ ಸಂಪುಟ ಸಚಿವರನ್ನು ನೇಮಿಸುವುದನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಲ್ಲಿ ಸಿಜೆಐ ಇದ್ದಲ್ಲಿ ಚುನಾವಣೆಯಲ್ಲಿ ಆಕ್ರಮವೆಸಗುವುದಕ್ಕೆ ಅಡ್ಡಿಯಾಗಬಹುದೆಂಬ ಭೀತಿಯಿಂದ ಬಿಜೆಪಿ ಈ ಯೋಜನೆಯನ್ನು ರೂಪಿಸಿದೆ ಎಂದು ಮಮತಾ ಆಪಾದಿಸಿದ್ದಾರೆ.

‘‘ನ್ಯಾಯಾಂಗಕ್ಕೆ ಮಾಡಲಾದ ಇಂತಹ ಘೋರ ಅಪಚಾರವನ್ನು ಭಾರತವು ಪ್ರಶ್ನಿಸಬೇಕಾಗಿದೆ. ಅವರು (ಬಿಜೆಪಿ) ನ್ಯಾಯಾಂಗವನ್ನು, ಸಚಿವರುಗಳು ನಡೆಸುವ ಕಾಂಗರೂ (ಅಣಕು) ನ್ಯಾಯಾಲಯವಾಗಿ ಪರಿವರ್ತಿಸಲು ಹೊರಟಿದ್ದಾರೆಯೇ?. ಮೈ ಲಾರ್ಡ್, ನಮ್ಮ ದೇಶವನ್ನು ರಕ್ಷಿಸಿ ಎಂದು ನಾವು ಭಾರತದ ನ್ಯಾಯಾಂಗದಲ್ಲಿ ಪ್ರಾರ್ಥಿಸುತ್ತೇವೆ ಎಂದು ಬ್ಯಾನರ್ಜಿ ‘ಎಕ್ಸ್’ನಲ್ಲಿ ಹೇಳಿದ್ದಾರೆ.

ಸಿಇಸಿ ಹಾಗೂ ಇಸಿ ಅವರ ನೇಮಕಾತಿ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಡುವ ಪ್ರಸ್ತಾವನೆಯ ವಿಧೇಯಕವನ್ನು ಕೇಂದ್ರ ಸರಕಾರವು ಈ ವಾರದ ಆರಂಭದಲ್ಲಿ ರಾಜ್ಯಸಭೆಯಲ್ಲಿ ಮಂಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News