ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ನ್ಯಾಯಯುತ ಪಾಲನ್ನು ನೀಡಿಲ್ಲ : ಕೇಂದ್ರ ಸಚಿವ ಜಿತನ್ ಮಾಂಝಿ ಅಸಮಾಧಾನ

ಜಿತನ್ ರಾಮ್ ಮಾಂಝಿ (PTI)
ಪಾಟ್ನಾ: ಕಳೆದ ಲೋಕಸಭೆ ಚುನಾವಣೆಯಲ್ಲಿ ಹಿಂದೂಸ್ತಾನಿ ಅವಾಮ್ ಮೋರ್ಚಾಗೆ ಬಿಜೆಪಿ ನೇತೃತ್ವದ ಎನ್‌ಡಿಎ ನ್ಯಾಯಯುತವಾದ ಪಾಲನ್ನು ನೀಡಿಲ್ಲ ಎಂದು ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
HAMನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜಿತನ್ ರಾಮ್ ಮಾಂಝಿ, ತಮ್ಮ ಪಕ್ಷವನ್ನು ನಿರಂತರವಾಗಿ ಕಡೆಗಣಿಸಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. HAMಗೆ ಪ್ರಾತಿನಿಧ್ಯ ನೀಡದ ಕಾರಣ ನಾವು NDAಯ ಭಾಗವಾಗಿಲ್ಲ ಎಂದು ಭಾಸವಾಗುತ್ತಿದೆ. ಬಿಜೆಪಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಮತ್ತು ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಝಾ ಸೇರಿದಂತೆ ಇತರರ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿದ್ದೇವೆ ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಯು ಕಡೆಗಣಿಸಿದೆ ಎಂದು ನಮ್ಮ ಪಕ್ಷದ ಕಾರ್ಯಕರ್ತರು ಭಾವಿಸುತ್ತಿದ್ದಾರೆ. ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕಳವಳಗಳನ್ನು ಸಂಪೂರ್ಣವಾಗಿ ಪರಿಹರಿಸಲಾಗುವುದು ಎಂದು ನಡ್ಡಾ ಮತ್ತು ಝಾ ನನಗೆ ಭರವಸೆ ನೀಡಿದ್ದಾರೆ. ಕಳೆದ ಲೋಕಸಭೆ ಚುನಾವಣೆ ವೇಳೆ ನಮ್ಮ ಪಕ್ಷಕ್ಕೆ ಎರಡು ಲೋಕಸಭಾ ಸ್ಥಾನಗಳು ಮತ್ತು ರಾಜ್ಯಸಭೆಯಲ್ಲಿ ಒಂದು ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ನಮ್ಮ ನಿಷ್ಠೆಯಿಂದಾಗಿ, ನಾವು ನಿಜವಾಗಿ ನೀಡಿದ್ದರಲ್ಲಿ ತೃಪ್ತರಾಗಿದ್ದೇವೆ ಎಂದು ಹೇಳಿದರು.
2024ರ ಲೋಕಸಭಾ ಚುನಾವಣೆಯಲ್ಲಿ, ಹಿಂದೂಸ್ತಾನಿ ಅವಾಮ್ ಮೋರ್ಚಾಗೆ ಕೇವಲ ಒಂದು ಸ್ಥಾನವನ್ನು ಮಾತ್ರ ನೀಡಲಾಗಿತ್ತು. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 243 ಕ್ಷೇತ್ರಗಳಲ್ಲಿ 35-40 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿರುವುದಾಗಿ ಮಾಂಝಿ ಹೇಳಿದರು.