ಜೂನ್ 8ರಂದು ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸಾಧ್ಯತೆ: ANI ವರದಿ
ಹೊಸದಿಲ್ಲಿ: ಕೇಂದ್ರದಲ್ಲಿ ಸರಕಾರ ರಚನೆಗಾಗಿ ಎನ್ಡಿಎ ಮೈತ್ರಿಕೂಟ ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ನಡುವೆ ಹಗ್ಗಜಗ್ಗಾಟ ಮುಂದುವರಿದಿರುವ ಬೆನ್ನಿಗೇ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಜೂನ್ 8ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಂಗಳವಾರ ಪ್ರಕಟವಾಗಿರುವ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 292 ಸ್ಥಾನಗಳನ್ನು ಗಳಿಸುವ ಮೂಲಕ ಸರಳ ಬಹುಮತ ಪಡೆದಿದೆ. ಆದರೆ, ಎನ್ಡಿಎ ಮೈತ್ರಿಕೂಟದ ಪ್ರಮುಖ ಪಕ್ಷವಾದ ಬಿಜೆಪಿಯ ಸಂಖ್ಯಾಬಲ 303ರಿಂದ 240ಕ್ಕೆ ಕುಸಿತಗೊಂಡಿದ್ದು, ಇದರಿಂದ ಸ್ವಂತ ಬಲದಲ್ಲಿ ಸರಕಾರ ರಚಿಸುವುದು ಬಿಜೆಪಿ ಪಾಲಿಗೆ ಅಸಾಧ್ಯವಾಗಿ ಪರಿಣಮಿಸಿದೆ. ಹೀಗಾಗಿ ಮೈತ್ರಿಪಕ್ಷಗಳ ನೆರವಿನೊಂದಿಗೆ ಸರಕಾರ ರಚಿಸಬೇಕಾದ ಇಕ್ಕಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಗುರಿಯಾಗಿದೆ.
ಈ ನಡುವೆ, ಸರಕಾರ ರಚನೆಯ ಹಕ್ಕು ಮಂಡಿಸಲು ವಿರೋಧ ಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಕೂಡಾ ಸಿದ್ಧತೆ ನಡೆಸಿದ್ದು, ಈ ಕುರಿತು ಕಾರ್ಯತಂತ್ರ ನಡೆಸಲು ಇಂದು ಸಂಜೆ 6 ಗಂಟೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರ ಸಭೆ ನಡೆಯಲಿದೆ.