ಅಮೆರಿಕ ಜೊತೆ ಬಾಹ್ಯಾಕಾಶ ತಂತ್ರಜ್ಞಾನ ಹಂಚಿಕೊಳ್ಳಲು ಕೋರಿದ್ದ ನಾಸಾ ತಜ್ಞರು; ಇಸ್ರೋ
ರಾಮೇಶ್ವರಂ : ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಅಭಿವೃದ್ಧಿ ಚಟುವಟಿಕೆಗಳನ್ನು ವೀಕ್ಷಿಸಿದ್ದ ಅಮೆರಿಕದ ಸಂಕೀರ್ಣ ರಾಕೆಟ್ ನಿರ್ಮಾಣ ತಜ್ಞರು ಬಾಹ್ಯಾಕಾಶ ತಂತ್ರಜ್ಞಾನವನ್ನು ತಮ್ಮೊಂದಿಗೆ ಹಂಚಿಕೊಳ್ಳುವಂತೆ ಭಾರತವನ್ನು ಕೋರಿದ್ದರು ಎಂದು ಇಸ್ರೋ ವರಿಷ್ಠ ಎಸ್. ಸೋಮನಾಥ್ ತಿಳಿಸಿದ್ದಾರೆ.
ತಮಿಳುನಾಡಿನ ಮದುರೈಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಂದರ್ಭ ಈ ವಿಷಯ ತಿಳಿಸಿದರು.
‘‘ಚಂದ್ರಯಾನ -3ರಲ್ಲಿ ಬಾಹ್ಯಾಕಾಶ ನೌಕೆಯನ್ನು ನಾವು ವಿನ್ಯಾಸಗೊಳಿಸಿದಾಗ ಹಾಗೂ ಅಭಿವೃದ್ಧಿಪಡಿಸಿದ ಸಂದರ್ಭ ನಾವು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲಿ ರಾಕೆಟ್ ಗಳನ್ನು ನಿರ್ಮಿಸುವ ಹಾಗೂ ಅತ್ಯಂತ ಸಂಕೀರ್ಣವಾದ ಮಿಶನ್ ಗಳನ್ನು ನಿರ್ವಹಿಸುವ ಜೆಟ್ ಪ್ರೊಪಲ್ಶನ್ ಲ್ಯಾಬೊರೇಟರಿ(ಜೆಪಿಎಲ್)ಯ ತಜ್ಞರನ್ನು ಆಹ್ವಾನಿಸಿದ್ದೆವು’’.
‘‘ನಾಸಾ-ಜೆಪಿಎಲ್ ನ 6 ತಜ್ಞರು ಇಸ್ರೋಗೆ ಆಗಮಿಸಿದ್ದರು. ಅವರಿಗೆ ನಾವು ಚಂದ್ರಯಾನ-3ರ ವಿನ್ಯಾಸ, ಅವುಗಳ ನಿರ್ಮಾಣ ಹಾಗೂ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ವಿಧಾನ ಇವೆಲ್ಲವೂಗಳನ್ನು ಅವರಿಗೆ ವಿವರಿಸಿದೆವು. ಅದಕ್ಕೆ ಅವರು , ‘ನೋ ಕಮೆಂಟ್ಸ್. ಎಲ್ಲವೂ ಒಳ್ಳೆಯದಾಗಲಿದೆ’’ ಎಂದಷ್ಟೇ ಹೇಳಿದ್ದರು ಎಂದು ಸೋಮನಾಥ್ ನೆನಪಿಸಿಕೊಂಡರು.
ಇಸ್ರೋ ಅತ್ಯಂತ ಕಡಿಮೆ ವೆಚ್ಚದಲ್ಲಿ ಅತ್ಯುನ್ನತ ತಂತ್ರಜ್ಞಾನದ ಉಪಕರಣಗಳನ್ನು ನಿರ್ಮಿಸುತ್ತಿರುವುದನ್ನು ಕಂಡು ಅವರು ಚಕಿತರಾಗಿದ್ದರು. ‘‘ನೀವು ಇವುಗಳನ್ನು ಹೇಗೆ ನಿರ್ಮಿಸುತ್ತೀರಿ. ನೀವು ಯಾಕೆ ಅವುಗಳನ್ನು ಅಮೆರಿಕ್ಕೆ ಮಾರಾಟ ಮಾಡಕೂಡದು ಎಂದು ವಿಚಾರಿಸಿದರು’’ ಏಂದು ಸೋಮನಾಥ್ ತಿಳಿಸಿದರು.
‘‘ಸಮಯ ಬದಲಾಗಿದೆ ಹಾಗೂ ಭಾರತವು ಅತ್ಯುತ್ತಮ ಬಾಹ್ಯಾಕಾಶ ಉಪಕರಣಗಳು ಹಾಗೂ ರಾಕೆಟ್ ಗಳನ್ನು ನಿರ್ಮಿಸಲು ಸಮರ್ಥವಾಗಿದೆ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಬಾಹ್ಯಾಕಾಶ ವಲಯವನ್ನು ಖಾಸಗಿ ಉದ್ಯಮಗಳಿಗೂ ಮುಕ್ತಗೊಳಿಸಿದ್ದಾರೆ’’ ಎಂದು ಹೇಳಿದರು.
ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವಾಗಿಸಬೇಕೆಂದು ಕರೆ ನೀಡಿದ ಅವರು ಕೇವಲ ಇಸ್ರೋ ಮಾತ್ರವಲ್ಲ, ಯಾರೂ ಬಾಹ್ಯಾಕಾಶ ತಂತ್ರಜ್ಞಾನವನ್ನು ವಿನ್ಯಾಸಗೊಳಿಸಬಹುದಾಗಿದೆ. ಚೆನ್ನೈನಲ್ಲಿರುವ ಕಂಪೆನಿಯೊಂದು ಅಗ್ನಿಕುಲ ಎಂಬ ಹೆಸರಿನ ರಾಕೆಟ್ ಗಳನ್ನು ನಿರ್ಮಿಸುತ್ತಿದ್ದರೆ, ಹೈದರಾಬಾದ್ ನಲ್ಲಿ ಸ್ಕೈರೂಟ್ ಎಂಬ ರಾಕೆಟ್ ನಿರ್ಮಾಣ ಸಂಸ್ಥೆಯಿದೆ. ದೇಶದಲ್ಲಿ ಕನಿಷ್ಠ ಐದು ಕಂಪನಿಗಳು ಇಂದು ಉಪಗ್ರಹಗಳು ಹಾಗೂ ರಾಕೆಟ್ ಗಳನ್ನು ತಯಾರಿಸುತ್ತಿವೆ’’ ಎಂದು ಸೋಮನಾಥ್ ತಿಳಿಸಿದರು.