ನ್ಯಾಷನಲ್ ಹೆರಾಲ್ಡ್ ಪ್ರಕರಣ | ಸೋನಿಯಾ, ರಾಹುಲ್ ಗಾಂಧಿಗೆ ನೋಟಿಸ್ ಜಾರಿಗೊಳಿಸುವುದಿಲ್ಲ: ದಿಲ್ಲಿ ನ್ಯಾಯಾಲಯ
File Photo: Reuters
ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸದ್ಯ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಇನ್ನಿತರರಿಗೆ ನೋಟಿಸ್ ಜಾರಿಗೊಳಿಸಲು ಶುಕ್ರವಾರ ದಿಲ್ಲಿ ನ್ಯಾಯಾಲಯವೊಂದು ನಿರಾಕರಿಸಿದೆ.
ಜಾರಿ ನಿರ್ದೇಶನಾಲಯದ ಅರ್ಜಿಯ ಕುರಿತು ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ವಿಶಾಲ್ ಗೊಗ್ನೆ, “ಕಾನೂನಿನ ನೂತನ ನಿಯಮಗಳ ಪ್ರಕಾರ, ಆರೋಪಿಗಳ ವಾದವನ್ನು ಆಲಿಸದೆ, ಜಾರಿ ನಿರ್ದೇಶನಾಲಯದ ದೂರನ್ನು (ದೋಷಾರೋಪ ಪಟ್ಟಿಗೆ ಸಮನಾದ ಜಾರಿ ನಿರ್ದೇಶನಾಲಯದ ದೂರು) ಪರಿಗಣಿಸಲು ಸಾಧ್ಯವಿಲ್ಲ” ಎಂದು ಹೇಳಿದರು.
“ಈ ಆದೇಶವನ್ನು ಮತ್ತಷ್ಟು ಮುಂದೂಡುವುದು ಬೇಡ. ನೋಟಿಸ್ ಅನ್ನು ಜಾರಿಗೊಳಿಸಿ” ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಮನವಿ ಮಾಡಿತು.
ಆದರೆ, ಜಾರಿ ನಿರ್ದೇಶನಾಲಯದ ಈ ಮನವಿಯನ್ನು ತಳ್ಳಿ ಹಾಕಿದ ವಿಶೇಷ ನ್ಯಾಯಾಧೀಶ ವಿಶಾಲ್ ಗೊಗ್ನೆ, “ನೋಟಿಸ್ ಜಾರಿಗೊಳಿಸುವುದು ಅಗತ್ಯ ಎಂದು ಮನವರಿಕೆಯಾಗುವವರೆಗೂ, ಅಂತಹ ಆದೇಶವನ್ನು ಜಾರಿಗೊಳಿಸಲು ಸಾಧ್ಯವಿಲ್ಲ"” ಎಂದು ಸ್ಪಷ್ಟಪಡಿಸಿದರು.
ನ್ಯಾಯಾಲಯವು ಯಾವುದೇ ಆದೇಶವನ್ನು ಜಾರಿಗೊಳಿಸುವುದಕ್ಕೂ ಮುನ್ನ, ಅದರಲ್ಲೇನಾದರೂ ಲೋಪದೋಷವಿದೆಯೆ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ ಎಂದು ನ್ಯಾ. ವಿಶಾಲ್ ಗೊಗ್ನೆ ಅಭಿಪ್ರಾಯಪಟ್ಟರು.
“ದೋಷಾರೋಪ ಪಟ್ಟಿಯಲ್ಲಿ ಕೆಲವು ದಾಖಲೆಗಳು ನಾಪತ್ತೆಯಾಗಿವೆ. ಆ ದಾಖಲೆಗಳನ್ನು ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಲಾಗಿದೆ. ಇದಾದ ನಂತರ, ನೋಟಿಸ್ ಜಾರಿಗೊಳಿಸುವ ಕುರಿತು ನ್ಯಾಯಾಲಯ ತೀರ್ಮಾನಿಸಲಿದೆ” ಎಂದು ನ್ಯಾಯಾಲಯ ಹೇಳಿತು.
ಆದರೆ, ನ್ಯಾಯಾಲಯದ ಅಭಿಪ್ರಾಯವನ್ನು ಅಲ್ಲಗಳೆದ ಜಾರಿ ನಿರ್ದೇಶನಾಲಯ, “ಅವು ತುಂಬಾ ಪಾರದರ್ಶಕವಾಗಿದ್ದವು’ ಎಂದು ಪ್ರತಿವಾದ ಮಂಡಿಸಿತು.
“ಏನನ್ನೂ ಮುಚ್ಚಿಡಲಾಗಿಲ್ಲ. ಆರೋಪಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಮುನ್ನ, ತಮ್ಮ ನಿಲುವನ್ನು ಮಂಡಿಸಲು ಅವರಿಗೆ ಒಂದು ಅವಕಾಶ ನೀಡಲಾಗಿತ್ತು” ಎಂದು ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯ ತಿಳಿಸಿತು.
ನಂತರ, ಪ್ರಕರಣದ ವಿಚಾರಣೆಯನ್ನು ಮೇ 2ಕ್ಕೆ ಮುಂದೂಡಲಾಯಿತು.