ಬಾಂಗ್ಲಾ ಕ್ರಿಕೆಟ್ ತಂಡದ ನಾಯಕನಾಗಿ ನಜ್ಮುಲ್ ಹುಸೈನ್ ಮರುನೇಮಕ
ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಸೋಮವಾರ ಒಂದು ವರ್ಷದ ಅವಧಿಗಾಗಿ ನಜ್ಮಲ್ ಹುಸೈನ್ ಶಂಟೊರನ್ನು ಕ್ರಿಕೆಟ್‌ನ ಎಲ್ಲಾ ಮಾದರಿಗಳಲ್ಲಿ ರಾಷ್ಟ್ರೀಯ ತಂಡದ ನಾಯಕನಾಗಿ ಮರು ನೇಮಿಸಿದೆ. ನಿಯಮಿತ ನಾಯಕ ಶಾಕಿಬ್ ಅಲ್ ಹಸನ್‌ರ ಲಭ್ಯತೆ ಕುರಿತ ಅನಿಶ್ಚಿತತೆಯ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಅಗ್ರ ಕ್ರಮಾಂಕದ ಬ್ಯಾಟರ್ ಆಗಿರುವ 25 ವರ್ಷದ ನಜ್ಮುಲ್ ಸ್ವದೇಶ ಮತ್ತು ವಿದೇಶದಲ್ಲಿ ನಡೆದ ನ್ಯೂಝಿಲ್ಯಾಂಡ್ ವಿರುದ್ಧದ ಎರಡು ಸರಣಿಗಳಲ್ಲಿ ಬಾಂಗ್ಲಾದೇಶವನ್ನು ಮುನ್ನಡೆಸಿದ್ದರು. ಆದರೆ, ಅವರು ನಾಯಕತ್ವವನ್ನು ಶಾಕಿಬ್‌ಗೆ ಹಸ್ತಾಂತರಿಸುವ ನಿರೀಕ್ಷೆಯಿತ್ತು.
‘‘ಖಂಡಿತವಾಗಿಯೂ ನಾಯಕನಾಗಿ ಶಾಕಿಬ್ ನಮ್ಮ ಮೊದಲ ಆಯ್ಕೆಯಾಗಿದ್ದಾರೆ, ಆದರೆ, ಯಾವುದೇ ಅನಿಶ್ಚಿತತೆಯಲ್ಲಿ ಇರಲು ನಾವು ಬಯಸುವುದಿಲ್ಲ’’ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಝ್ಮುಲ್ ಹಸನ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಕಳೆದ ವರ್ಷ ಭಾರತದಲ್ಲಿ ನಡೆದ ವಿಶ್ವಕಪ್ ವೇಳೆ ಶಾಕಿಬ್‌ಗೆ ಕಣ್ಣಿನಲ್ಲಿ ಸಮಸ್ಯೆ ತಲೆದೋರಿದ್ದು, ಬ್ರಿಟನ್ ಮತ್ತು ಸಿಂಗಾಪುರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದೇ ಕಾರಣದಿಂದಾಗಿ ಈಗ ನಡೆಯುತ್ತಿರುವ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಟಿ20 ಪಂದ್ಯಾವಳಿಯ ಹಲವು ಪಂದ್ಯಗಳಿಂದ ಅವರು ದೂರವಿರಲಿದ್ದಾರೆ ಎನ್ನಲಾಗಿದೆ.