NCERT ವೃತ್ತಿಪರ ಸಂಸ್ಥೆಯಾಗಿ ಉಳಿದಿಲ್ಲ, ಆರೆಸ್ಸೆಸ್‌ ನ ಅಂಗಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದೆ: ಜೈರಾಮ್ ರಮೇಶ್ ಟೀಕೆ

Update: 2024-06-17 19:29 IST
NCERT ವೃತ್ತಿಪರ ಸಂಸ್ಥೆಯಾಗಿ ಉಳಿದಿಲ್ಲ, ಆರೆಸ್ಸೆಸ್‌ ನ ಅಂಗಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದೆ: ಜೈರಾಮ್ ರಮೇಶ್ ಟೀಕೆ

 ಜೈರಾಮ್ ರಮೇಶ್ | PTI  

  • whatsapp icon

ಹೊಸ ದಿಲ್ಲಿ: 2024ರ ನೀಟ್ ಪರೀಕ್ಷೆಗಳಲ್ಲಿ ಆಗಿರುವ ಕೃಪಾಂಕ ಅವ್ಯವಸ್ಥೆಗೆ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿ ಕಾರಣ ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ದೂಷಿಸಿರುವ ಬೆನ್ನಿಗೇ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷದ ಸಂವಹನ ವಿಭಾಗದ ಉಸ್ತುವಾರಿ ಜೈರಾಮ್ ರಮೇಶ್, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು ಆಡಳಿತಾರೂಢ ಪಕ್ಷದ ರಾಜಕೀಯ ಸಾಧನವಾಗಿ ಬದಲಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರವು ತನ್ನ ನಿರ್ಲಕ್ಷ್ಯದ ವೈಫಲ್ಯದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ ಮೇಲೆ ದೂಷಣೆಯ ಆಟವಾಡುತ್ತಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, “NCERT ವೃತ್ತಿಪರ ಸಂಸ್ಥೆಯಾಗಿ ಉಳಿದಿಲ್ಲ. ಅದು 2014ರಿಂದ ಆರೆಸ್ಸೆಸ್‌ ನ ಅಂಗಸಂಸ್ಥೆಯಂತೆ ಕಾರ್ಯನಿರ್ವಹಿಸುತ್ತಿದೆ. ಅದು ಪರಿಷ್ಕರಣೆಗೊಳಿಸಿರುವ 11ನೇ ತರಗತಿಯ ರಾಜಕೀಯ ಶಾಸ್ತ್ರದ ಪಠ್ಯಪುಸ್ತಕದಲ್ಲಿ ಜಾತ್ಯತೀತ ಪರಿಕಲ್ಪನೆಯನ್ನು ಟೀಕಿಸಲಾಗಿದ್ದು, ಈ ಕುರಿತು ರಾಜಕೀಯ ಪಕ್ಷಗಳ ನೀತಿಗಳನ್ನು ಅದು ಪರಿಗಣನೆಗೆ ತೆಗೆದುಕೊಂಡಿರುವುದು ಈ ಸಂಗತಿಯನ್ನು ಬಯಲುಗೊಳಿಸಿದೆ. NCERTಯ ಕೆಲಸ ವಸ್ತುನಿಷ್ಠವಾಗಿ ಪಠ್ಯಪುಸ್ತಕಗಳನ್ನು ತಯಾರಿಸುವುದೇ ಹೊರತು, ರಾಜಕೀಯ ಕರಪತ್ರ ಮತ್ತು ಕಾರ್ಯಸೂಚಿಯಾಗುವುದಲ್ಲ. ಇಂತಹ ಕೃತ್ಯದ ಮೂಲಕ ಭಾರತೀಯ ಗಣರಾಜ್ಯದ ಆಧಾರ ಸ್ತಂಭವಾಗಿರುವ ಸಂವಿಧಾನ ಪೀಠಿಕೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವ ಜಾತ್ಯತೀತತೆ ಮೇಲೆ NCERT ದಾಳಿ ನಡೆಸುತ್ತಿದೆ. ಜಾತ್ಯತೀತತೆಯು ಸಂವಿಧಾನದ ಮೂಲ ರಚನೆಯ ಅತ್ಯಗತ್ಯ ಭಾಗ ಎಂದು ಹಲವಾರು ಸುಪ್ರೀಂ ಕೋರ್ಟ್ ತೀರ್ಪುಗಳು ಸ್ಪಷ್ಟಪಡಿಸಿವೆ” ಎಂದು ಬರೆದುಕೊಂಡಿದ್ದಾರೆ.

2024ರ ನೀಟ್ ಯುಜಿ ಪರೀಕ್ಷೆಯಲ್ಲಿ ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಹಲವು ವಿದ್ಯಾರ್ಥಿಗಳಿಗೆ 70-80ರಷ್ಟು ಕೃಪಾಂಕ ನೀಡಿರುವುದು ಸದ್ಯ ವಿವಾದದ ಕೇಂದ್ರ ಬಿಂದುವಾಗಿದೆ. ಈ ಹಿನ್ನೆಲೆಯಲ್ಲಿ ನೀಟ್-ಯುಜಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರತೊಡಗಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News