ಎನ್ ಡಿ ಎ ಯು ಮಹಾರಾಷ್ಟ್ರದ ಪ್ರಗತಿಗೆ ಶ್ರಮಿಸಲಿದೆ : ಪ್ರಧಾನಿ ಮೋದಿ
ಹೊಸದಿಲ್ಲಿ : ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟದ ಜಯವು ಉತ್ತಮ ಆಡಳಿತಕ್ಕೆ, ಅಭಿವೃದ್ಧಿಗೆ ಸಂದ ಜಯ. ಎನ್ ಡಿ ಎ ಯು ಮಹಾರಾಷ್ಟ್ರದ ಪ್ರಗತಿಗೆ ಶ್ರಮಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಎನ್ ಡಿ ಯು ನೇತೃತ್ವದ ಮಹಾಯುತಿ ಮೈತ್ರಿಕೂಟವು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಹಮತ ಗಳಿಸುವ ಮೂಲಕ ಜಯಭೇರಿ ಬಾರಿಸಿದ ಬಳಿಕ, ಎಕ್ಸ್ ಸಾಮಾಜಿಕ ಜಾಲತಣದಲ್ಲಿ ಪೋಸ್ಟ್ ಮಾಡಿರುವ, ಅವರು ಮಹಾರಾಷ್ಟ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
“ಎನ್ಡಿಎಗೆ ಐತಿಹಾಸಿಕ ಜನಾದೇಶಕ್ಕಾಗಿ ಮಹಾರಾಷ್ಟ್ರದ ನನ್ನ ಸಹೋದರಿಯರು ಮತ್ತು ಸಹೋದರರಿಗೆ, ವಿಶೇಷವಾಗಿ ರಾಜ್ಯದ ಯುವಕರು ಮತ್ತು ಮಹಿಳೆಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಈ ವಾತ್ಸಲ್ಯಕ್ಕೆ ಸಾಟಿಯಿಲ್ಲ. ನಮ್ಮ ಮೈತ್ರಿಯು ಮಹಾರಾಷ್ಟ್ರದ ಪ್ರಗತಿಗೆ ಶ್ರಮಿಸುತ್ತದೆ ಎಂದು ನಾನು ಜನರಿಗೆ ಭರವಸೆ ನೀಡುತ್ತೇನೆ. ಜೈ ಮಹಾರಾಷ್ಟ್ರ!” ಎಂದು ಅವರು ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
“ಎನ್ಡಿಎಯ ಜನಪರ ಪ್ರಯತ್ನಗಳು ಎಲ್ಲೆಡೆ ಪ್ರತಿಧ್ವನಿಸುತ್ತಿವೆ! ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಗಳಿಗೆ ಆಶೀರ್ವಾದ ಮಾಡಿದ್ದಕ್ಕಾಗಿ ನಾನು ವಿವಿಧ ರಾಜ್ಯಗಳ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅವರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ನಾವು ಈಡೇರಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಈ ಗೆಲುವಿನ ಸಂದರ್ಭ ಕಾರ್ಯಕರ್ತರನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಪ್ರತಿಯೊಬ್ಬ ಎನ್ಡಿಎ ಕಾರ್ಯಕರ್ತರ ಸೇವೆಗಾಗಿ ನಾನು ಹೆಮ್ಮೆಪಡುತ್ತೇನೆ. ಅವರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ, ಜನರ ನಡುವೆ ಹೋಗಿ ನಮ್ಮ ಉತ್ತಮ ಆಡಳಿತದ ಕಾರ್ಯಸೂಚಿಯನ್ನು ಜನರಿಗೆ ತಲುಪಿದ್ದಾರೆ” ಎಂದು ಪ್ರಶಂಸಿದ್ದಾರೆ.
ಜಾರ್ಖಂಡ್ ನ ಮತದಾರರನ್ನು ನೆನಪಿಸಿಕೊಂಡಿರುವ ಮೋದಿಯವರು, ಜೆಎಂಎಂ ನೇತೃತ್ವದ ಮೈತ್ರಿಕೂಟದ ಸಾಧನೆಗಾಗಿ ಅಭಿನಂದನೆ ಸಲ್ಲಿಸಿದ್ದಾರೆ.