ದೇಶಕ್ಕೆ ಸುಭದ್ರ ಸರ್ಕಾರದ ಅಗತ್ಯವಿದೆ, ಅದು ಬಹುಮತ ಹೊಂದಿದ ನಿರ್ದಯಿ ಪಕ್ಷದ ಸರ್ಕಾರವಾಗಿರಬಾರದು: ಉದ್ಧವ್ ಠಾಕ್ರೆ
ಮುಂಬೈ: ದೇಶಕ್ಕೆ ಸುಭದ್ರ ಸರ್ಕಾರದ ಅಗತ್ಯವಿದೆ; ಆದರೆ, ಯಾವುದೇ ನಿರ್ದಯಿ ಪಕ್ಷದಸರ್ಕಾರವಲ್ಲ ಎಂದು ಹೇಳಿರುವ ಶಿವಸೇನೆ(ಉದ್ಧವ್ ಠಾಕ್ರೆ ಬಣ)ಯ ಮುಖ್ಯಸ್ಥ ಉದ್ಧವ್ ಠಾಕ್ರೆ, ಮೈತ್ರಿ ಸರ್ಕಾರದ ಆಡಳಿತದ ಪರ ವಕಾಲತ್ತು ವಹಿಸಿದ್ದಾರೆ.
ಕೇಂದ್ರ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ತಮ್ಮ ಪಕ್ಷದ ವಾರ್ಷಿಕ ದಸರಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಆಳುವವರ ಕುರ್ಚಿಯು ಅಸ್ಥಿರವಾಗಿದ್ದಾಗ ಮಾತ್ರ ದೇಶವು ಸುಭದ್ರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮೈತ್ರಿ ಸರ್ಕಾರದ ಪರ ವಕಾಲತ್ತು ವಹಿಸಿ ಮಾತನಾಡಿದ INDIA ಮೈತ್ರಿಕೂಟದ ಭಾಗವಾಗಿರುವ ಉದ್ಧವ್ ಠಾಕ್ರೆ, ಡಾ. ಮನಮೋಹನ್ ಸಿಂಗ್, ಪಿ.ವಿ.ನರಸಿಂಹರಾವ್ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವಧಿಯಲ್ಲಿ ಎಲ್ಲರ ಕಾಳಜಿಯನ್ನೂ ವಹಿಸುತ್ತಿದ್ದ ಸರ್ಕಾರಗಳ ನಿದರ್ಶನ ನೀಡಿದರು.
“ಕಳೆದ ಒಂಬತ್ತು ವರ್ಷಗಳಿಂದ ನಮಗೆ ಸುಭದ್ರ ಸರ್ಕಾರವಿದೆ. ಆದರೆ, ಜನರ ಸಮಸ್ಯೆಗಳೇನಾದರೂ ಬಗೆಹರಿದಿವೆಯೆ?” ಎಂದು ಪ್ರಶ್ನಿಸಿದ ಅವರು, “ದೇಶದಲ್ಲಿ ಸುಭದ್ರ ಸರ್ಕಾರವಿರಬೇಕು, ಆದರೆ, ಯಾವುದೇ ಬಹುಮತ ಹೊಂದಿರುವ ಒಂದು ನಿರ್ದಯಿ ಪಕ್ಷದ ಸರ್ಕಾರವಲ್ಲ” ಎಂದು ಒಂದು ಕಾಲದ ತಮ್ಮ ಮಿತ್ರ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.