ಫೇಸ್ ಐಡಿ, ಕ್ಯೂಆರ್ ಕೋಡ್ ಹೊಂದಿರುವ ನೂತನ ಆಧಾರ್ ಆ್ಯಪ್ ಗೆ ಚಾಲನೆ

ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಆಧಾರ್ ಅನ್ನು ಹೆಚ್ಚು ಸುಲಭ ಮತ್ತು ಸುರಕ್ಷಿತವಾಗಿಸುವ ಕ್ರಮವಾಗಿ ಬಹುನಿರೀಕ್ಷಿತ ಆಧಾರ್ ಆ್ಯಪ್ ಅನ್ನು ಮಂಗಳವಾರ ಬಿಡುಗಡೆಗೊಳಿಸಿದ್ದಾರೆ.
ಸಚಿವರು ಎಕ್ಸ್‌ನಲ್ಲಿ ಪ್ರಕಟಿಸಿರುವ ನೂತನ ಆ್ಯಪ್ ಮುಖ ಗುರುತು (ಫೇಸ್ ಐಡಿ) ಮತ್ತು ಕೃತಕ ಬುದ್ಧಿಮತ್ತೆ(ಎಐ)ಯನ್ನು ಸಂಯೋಜಿಸುವ ಮೂಲಕ ಭಾರತೀಯ ನಾಗರಿಕರಿಗೆ ಡಿಜಿಟಲ್ ಆಧಾರ್ ಸೇವೆಯನ್ನು ಒದಗಿಸಲಿದೆ.
ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ)ದ ಸಹಯೋಗದೊಂದಿಗೆ ಅಭಿವೃದ್ಧಿಗೊಂಡಿರುವ ಈ ಆ್ಯಪ್ ದೃಢೀಕರಣಕ್ಕಾಗಿ ಕ್ಯೂಆರ್ ಕೋಡ್ ಆಧಾರಿತ ತ್ವರಿತ ಪರಿಶೀಲನೆ ಮತ್ತು ನೈಜ ಸಮಯದ ಮುಖ ಗುರುತನ್ನು ಒಳಗೊಂಡಿದೆ. ಇದು ಜನರು ತಮ್ಮೊಂದಿಗೆ ಭೌತಿಕ ಫೋಟೊಪ್ರತಿಗಳು ಅಥವಾ ಕಾರ್ಡ್‌ಗಳನ್ನು ಒಯ್ಯುವ ಅಗತ್ಯವನ್ನು ನಿವಾರಿಸುತ್ತದೆ.
ಆಧಾರ್ ಪರಿಶೀಲನೆಯು ಯುಪಿಐ ಪಾವತಿ ಮಾಡುವಷ್ಟು ಸರಳವಾಗಲಿದೆ ಎಂದು ವೈಷ್ಣವ್ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ನೂತನ ಆಧಾರ್ ಆ್ಯಪ್‌ನ ಆಗಮನದೊಂದಿಗೆ ಬಳಕೆದಾರರು ಇನ್ನು ಮುಂದೆ ಪ್ರಯಾಣ, ಹೋಟೆಲ್‌ನಲ್ಲಿ ವಸತಿ ಅಥವಾ ಶಾಪಿಂಗ್ ಸಂದರ್ಭದಲ್ಲಿಯೂ ಭೌತಿಕ ಆಧಾರ್ ಕಾರ್ಡ್‌ನ್ನು ಕೊಂಡೊಯ್ಯುವ ಅಥವಾ ಅದರ ಝೆರಾಕ್ಸ್ ಪ್ರತಿಗಳನ್ನು ಹಸ್ತಾಂತರಿಸುವ ಅಗತ್ಯವಿರುವುದಿಲ್ಲ.
ಆ್ಯಪ್ ಶೀಘ್ರವೇ ಬೀಟಾ ಪರೀಕ್ಷಾ ಹಂತದಿಂದ ಹೊರಬರಲಿದ್ದು, ರಾಷ್ಟ್ರವಾಪಿ ಜಾರಿಗೊಳ್ಳಲಿದೆ.
ಜನರು ಆಧಾರ್ ಕಾರ್ಡ್‌ನ ಭೌತಿಕ ಫೋಟೊಕಾಪಿಯನ್ನು ತೋರಿಸುವ ಬದಲು ಕ್ಯೂಆರ್ ಕೋಡ್ ನ್ನು ಸ್ಕ್ಯಾನ್ ಮಾಡಿದ ಬಳಿಕ ಅವರ ಗುರುತನ್ನು ಪರಿಶೀಲಿಸಲು ನೂತನ ಆ್ಯಪ್‌ನಿಂದ ಸಾಧ್ಯವಾಗಲಿದೆ.
ಆಧಾರ್ ಆ್ಯಪ್ ಸುರಕ್ಷಿತವಾಗಿದೆ ಮತ್ತು ಬಳಕೆದಾರರ ಒಪ್ಪಿಗೆಯೊಂದಿಗೆ ಮಾತ್ರ ಅದನ್ನು ಹಂಚಿಕೊಳ್ಳಬಹುದಾಗಿದೆ. ಅದು ಶೇ.100ರಷ್ಟು ಡಿಜಿಟಲ್ ಮತ್ತು ಸುರಕ್ಷಿತವಾಗಿದೆ ಎಂದು ವೈಷ್ಣವ್ ಹೇಳಿದ್ದಾರೆ.