ಬಿಹಾರದ ಆಸ್ಪತ್ರೆಯಿಂದ ನವಜಾತ ಶಿಶು ಕಳ್ಳತನ
ಪಾಟ್ನಾ, : ಬಿಹಾರದ ಬೇಗುಸರಾಯ್‌ನ ಸದರ್ ಆಸ್ಪತ್ರೆಯಿಂದ ನವಜಾತ ಶಿಶುವನ್ನು ಕಳವು ಮಾಡಿದ ಘಟನೆ ವರದಿಯಾಗಿದೆ. ಮಗು ಜನಿಸಿ 20 ಗಂಟೆಗಳ ಬಳಿಕ ಈ ಕೃತ್ಯ ನಡೆದಿದ್ದು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆಯ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಆಸ್ಪತ್ರೆಯ ವಿಶೇಷ ನವಜಾತ ಶಿಶುಗಳ ಆರೈಕೆ ಕೇಂದ್ರವನ್ನು ಪ್ರವೇಶಿಸಿದ್ದ ವಯಸ್ಸಾದ ಮಹಿಳೆ ಮಗುವನ್ನು ಎತ್ತಿಕೊಂಡು, ಬಟ್ಟೆಯಲ್ಲಿ ಸುತ್ತಿ ಅಲ್ಲಿಂದ ಪರಾರಿಯಾಗಿದ್ದನ್ನು ಈ ದೃಶ್ಯಾವಳಿ ತೋರಿಸಿದೆ.
ಶನಿವಾರ ರಾತ್ರಿ 10:30ಕ್ಕೆ ಲೋಹಿಯಾ ನಗರ ನಿವಾಸಿ ನಂದಿನಿ ದೇವಿ ಎನ್ನುವವರು ಈ ಮಗುವಿಗೆ ಜನ್ಮ ನೀಡಿದ್ದರು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ರವಿವಾರ ಸಂಜೆ ಏಳು ಗಂಟೆಯ ಸುಮಾರಿಗೆ ನವಜಾತ ಶಿಶುವನ್ನು ನೋಡಲು ಕುಟುಂಬ ಸದಸ್ಯರು ಆಸ್ಪತ್ರೆಗೆ ಬಂದಾಗ ಅದು ಕಾಣೆಯಾಗಿತ್ತು. ನರ್ಸ್ ಮಗುವನ್ನು ತನಗೆ ಒಪ್ಪಿಸಿಲ್ಲ ಎಂದು ನಂದಿನಿ ದೇವಿ ತಿಳಿಸಿದಾಗ ಮಧ್ಯಾಹ್ನ ಸುಮಾರು ಎರಡು ಗಂಟೆಗೆ ಮಗುವನ್ನು ಕೊನೆಯ ಬಾರಿ ನೋಡಿದ್ದ ತಂದೆ ಆಸ್ಪತ್ರೆಗೆ ಧಾವಿಸಿದ್ದರು.
ಪರಿಸ್ಥಿತಿಯ ಗಂಭೀರತೆಯನ್ನು ಒಪ್ಪಿಕೊಂಡ ಸಿವಿಲ್ ಸರ್ಜನ್ ಡಾ.ಪ್ರಮೋದ್ ಕುಮಾರ್ ಸಿಂಗ್ ಅವರು, ಬಹಳಷ್ಟು ಜನರು ಆಸ್ಪತ್ರೆ ಆವರಣವನ್ನು ಪ್ರವೇಶಿಸುತ್ತಾರೆ. ಇದು ಇತರ ಸಂಬಂಧಿಕರಿಂದ ಮಗುವಿನ ತಾಯಿಯನ್ನು ಗುರುತಿಸುವುದನ್ನು ಮತ್ತು ಪ್ರತ್ಯೇಕಿಸುವುದನ್ನು ಕಷ್ಟವಾಗಿಸುತ್ತದೆ ಎಂದರು.
ನವಜಾತ ಶಿಶು ಆರೈಕೆ ಕೇಂದ್ರದಿಂದ ಮಗು ಹೇಗೆ ನಾಪತ್ತೆಯಾಯಿತು ಎಂಬ ಬಗ್ಗೆ ಸ್ಪಷ್ಟನೆಯನ್ನು ನೀಡಲು ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಾಧ್ಯವಾಗಿಲ್ಲ. ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದ ಬಳಿಕವೇ ಮಗು ಕಳ್ಳತನವಾಗಿದ್ದು ಬೆಳಕಿಗೆ ಬಂದಿತ್ತು.